Connect with us

    LATEST NEWS

    ಅಶಕ್ತರಿಗೆ ಮೊದಲ ಪ್ರಾಶಸ್ತ್ಯ- ಮೂರು ಪಿಡಬ್ಲ್ಯುಡಿ ಮತಗಟ್ಟೆ

    ಅಶಕ್ತರಿಗೆ ಮೊದಲ ಪ್ರಾಶಸ್ತ್ಯ- ಮೂರು ಪಿಡಬ್ಲ್ಯುಡಿ ಮತಗಟ್ಟೆ

    ಮಂಗಳೂರು ಏಪ್ರಿಲ್ 09; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯಲಿರುವ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆಯಲಿದ್ದು ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡುತ್ತಿದೆ.

    ಜಿಲ್ಲೆಯಲ್ಲಿರುವ ವಿಶೇಷ ಚೇತನರನ್ನು ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಈಗಾಗಲೇ ಗುರುತಿಸಿದ್ದು, ಇವರೆಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರಾದ ಸಿಇಒ ಜಿಲ್ಲಾ ಪಂಚಾಯತ್ ಡಾ ಸೆಲ್ವಮಣಿ ಆರ್ ಅವರು ತಿಳಿಸಿದರು.

    ಜಿಲ್ಲೆಯಲ್ಲಿ 10,911 ವಿಕಲಚೇತನ ಮತದಾರರಿದ್ದು, ಇವರಲ್ಲಿ ದೈಹಿಕ ವಿಕಲಚೇತನರು 5756, ಅಂಧರು 829. ಶ್ರವಣದೋಷವುಳ್ಳವರು 1006, ಬಹುವಿಧ ವಿಕಲಚೇತನರು 3320. ಅರ್ಹ ಮತದಾರರು ಯಾವುದೇ ಕಾರಣದಿಂದ ಮತದಾನದಿಂದ ವಂಚಿತರಾಗಬಾರದು ಎಂಬುದು ಚುನಾವಣಾ ಆಯೋಗದ ಧ್ಯೇಯ.

    ಈ ನಿಟ್ಟಿನಲ್ಲಿ ವಿಶೇಷ ಚೇತನರನ್ನು ಗಮನದಲ್ಲಿರಿಸಿ 1014 ಮತ ಕೇಂದ್ರಗಳಿಗೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ವಯಂ ಪ್ರೇರಿತರಾಗಿ ಆಗಮಿಸಿ ಮತದಾನ ಮಾಡುವಂತೆ ಪ್ರೇರೇಪಿಸಲು 1861 ಮತಗಟ್ಟೆಗಳ್ಲಿ ರ್ಯಾಂಪ್ ವ್ಯವಸ್ಥೆ, ಮತಗಟ್ಟೆಗಳಲ್ಲಿ ಭೂತಕನ್ನಡಿ ವ್ಯವಸ್ಥೆ ಮತ್ತು 1014 ಮತಕೇಂದ್ರಗಳಿಗೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ಮತದಾನ ಮಾಡಲು ಮತಗಟ್ಟೆಗೆ ಬರುವ ಅಂಧರಿಗೆ ಎಲ್ಲ ಮತದಾನ ಕೇಂದ್ರಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್‍ನಲ್ಲಿ ಬ್ರೈಲ್ ಲಿಪಿ ಮಾದರಿ ಮತಪತ್ರವನ್ನು ಒದಗಿಸಲಾಗುತ್ತಿದೆ. ವಿಕಲಚೇತರನ್ನೊಳಗೊಂಡಂತೆ ಪ್ರತಿಯೊಂದು ತಾಲೂಕಿನಲ್ಲೂ ಸ್ವೀಪ್ ಸಮಿತಿ ಸಹಯೋಗದೊಂದಿಗೆ ಮತದಾನ ಜಾಗೃತಿ ಶಿಬಿರ ಹಾಗೂ ಪಥಸಂಚಲನಗಳನ್ನು ಮಾಡಲಾಗುತ್ತಿದೆ. ಇವರೆಡೆಗೆ ತೆರಳಿ ಇವಿಎಂ ಮೂಲಕ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲಾಗಿದೆ.

    ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಮತದಾನದ ದಿನ ಎಲ್ಲ ವ್ಯವಸ್ಘೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಮಂಗಳೂರು, ಬೆಳ್ತಂಗಡಿ, ಪುತ್ತೂರು ತಾಲೂಕಿನಲ್ಲಿ ಒಂದೊಂದು (PWD) ವಿಕಲಚೇತನ ಸ್ನೇಹಿ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ.

    ಈ ಮತಗಟ್ಟೆಗಳ ವಿಶೇಷವೆನೆಂದರೆ ಮತಗಟ್ಟೆಯ ಎಲ್ಲ ಅಧಿಕಾರಿಗಳು ವಿಕಲ ಚೇತನರು. ಇವರು ಎಲ್ಲ ರೀತಿಯ ಕೆಲಸಗಳನ್ನು ನಿಭಾಯಿಸಬಲ್ಲರು ಎಂಬದುನ್ನು ತೋರಿಸುವುದು ಹಾಗೂ ಸಮಾನರು ಎಂದು ತೋರಿಸಲು ಈ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಬಾರಿ 100% ವಿಕಲಚೇತನರ ಮತದಾನ ದಾಖಲಿಸಲು ಜಿಲ್ಲೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಂಗವಿಕಲ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ಯಮುನಾ ಮಾಹಿತಿ ನೀಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ವಿಶೇಷವಾಗಿ ಮತದಾರರ ಜಾಗೃತಿಗಾಗಿ ಎಲ್ಲರನ್ನೂ ತಲುಪಲು ಸ್ವೀಪ್ ಕಾರ್ಯಕ್ರಮದ ಮುಖಾಂತರ ಎಲ್ಲ ರೀತಿಯ ಕ್ರಮಗಳನ್ನು ಹಮ್ಮಿಕೊಂಡಿದೆ. ಅಶಕ್ತರಿಗೆ ಪ್ರಾಧಾನ್ಯತೆಯನ್ನು ನೀಡಿ ಅವರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply