ಬೆಂಗಳೂರು,ಎಪ್ರಿಲ್ 23: ಬೆಂಗಳೂರು ರಾಂಪುರದಲ್ಲಿ ಗುರುವಾರ ಸಂಜೆ ಭೀಕರ ಅಗ್ನಿ ದುರಂತ ಸಂಭವಿಸಿದೆ. ದೊಡ್ಡಗುಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿರುವ ಗುಜರಿ ಗೋದಾಮಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಗೋದಾಮು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.

ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಪ್ಲಾಸ್ಟಿಕ್, ರಬ್ಬರ್ ಮತ್ತು ಇತರೆ ರಾಸಾಯನಿಕಯುಕ್ತ ವಸ್ತುಗಳಿಂದಾಗಿ ಬೆಂಕಿ ಕ್ಷಣಾರ್ಧದಲ್ಲಿ ರೌದ್ರಾವತಾರ ತಾಳಿತು. ಅವಘಡದ ತೀವ್ರತೆ ಎಷ್ಟಿತ್ತೆಂದರೆ, ಸ್ಥಳದಿಂದ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯವರೆಗೂ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು, ದೂರದ ಬಡಾವಣೆಗಳ ನಿವಾಸಿಗಳಿಗೂ ಬೆಂಕಿಯ ಭೀಕರತೆ ಗೋಚರಿಸುವಂತಿತ್ತು. ದಟ್ಟ ಹೊಗೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಉಂಟಾಗಿದ್ದು, ಸ್ಥಳೀಯರು ಉಸಿರಾಟದ ತೊಂದರೆಯಿಂದ ಕಂಗಾಲಾಗಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹತ್ತಕ್ಕೂ ಹೆಚ್ಚು ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಗೋದಾಮಿನ ಒಳಗೆ ದಹನಕಾರಿ ವಸ್ತುಗಳು ಹೆಚ್ಚಾಗಿದ್ದರಿಂದ ಬೆಂಕಿಯನ್ನು ಹತೋಟಿಗೆ ತರಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲವಾದರೂ, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಅಂದಾಜಿಸಲಾಗಿದೆ.