ಬೆಂಗಳೂರು,ಮಾರ್ಚ್ 27: ಮೆಜೆಸ್ಟಿಕ್ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ನಲ್ಲಿ ತಡರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಭಸ್ಮವಾಗಿರುವ ಘಟನೆ ನಗರದ ಪ್ರಸಿದ್ಧ ಲುಲು ಮಾಲ್ ಮುಂಭಾಗ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆ ಹಾಗೂ ಸಾರ್ವಜನಿಕರ ಜಾಗರೂಕತೆಯಿಂದಾಗಿ ಬಸ್ಸಿನಲ್ಲಿದ್ದ ಸುಮಾರು 40 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುರುವಾರ ರಾತ್ರಿ 10:15ಕ್ಕೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಶಿವಮೊಗ್ಗದತ್ತ ಹೊರಟಿದ್ದ ಕರ್ನಾಟಕ ಸಾರಿಗೆ ಬಸ್, ಕೇವಲ ಐದೇ ನಿಮಿಷಗಳಲ್ಲಿ ಅಂದರೆ 10:20ರ ಸುಮಾರಿಗೆ ಸುಜಾತಾ ಚಿತ್ರಮಂದಿರದ ಬಳಿಯ ಲುಲು ಮಾಲ್ ತಲುಪಿತ್ತು. ಈ ವೇಳೆ ಬಸ್ಸಿನ ಎಂಜಿನ್ ಹಾಗೂ ಕೆಳಭಾಗದಿಂದ ದಟ್ಟವಾದ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನ ಹಿಂಭಾಗದಲ್ಲಿ ಬೆಂಕಿ ಇರುವುದನ್ನು ಗಮನಿಸಿದ ಹಾದಿಹೋಕರು, ಕೂಡಲೇ ಚಾಲಕನಿಗೆ ಕೂಗಿ ಎಚ್ಚರಿಸಿದ್ದಾರೆ.
ಅಪಾಯದ ಮುನ್ಸೂಚನೆ ಅರಿತ ಚಾಲಕ, ತಕ್ಷಣವೇ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರಿಗೆ ಇಳಿಯುವಂತೆ ಸೂಚಿಸಿದರು. ಪ್ರಯಾಣಿಕರು ಲಗೇಜ್ಗಳ ಸಮೇತ ಕೆಳಗಿಳಿದ ಕೇವಲ ಎರಡು ನಿಮಿಷಗಳಲ್ಲಿ ಬೆಂಕಿ ಇಡೀ ಬಸ್ಸನ್ನು ಆವರಿಸಿತು. ಬೆಂಕಿಯ ತೀವ್ರತೆಗೆ ಬಸ್ಸಿನ ಕಿಟಕಿ ಗಾಜುಗಳು ಸಿಡಿದು ಜ್ವಾಲೆ ಅತೀ ಎತ್ತರಕ್ಕೆ ಚಿಮ್ಮುತ್ತಿದ್ದುದು ಕಂಡುಬಂದಿತು. ಇದರಿಂದ ಸ್ಥಳೀಯರಲ್ಲಿ ಹಾಗೂ ವಾಹನ ಸವಾರರಲ್ಲಿ ತೀವ್ರ ಆತಂಕ ಮನೆಮಾಡಿತ್ತು.
ಘಟನೆಯ ಹಿನ್ನೆಲೆಯಲ್ಲಿ ರಾಜಾಜಿನಗರ ಮತ್ತು ಮೆಜೆಸ್ಟಿಕ್ ಸಂಪರ್ಕಿಸುವ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಎರಡು ವಾಹನಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿವೆ. ಮಲ್ಲೇಶ್ವರಂ ಮತ್ತು ರಾಜಾಜಿನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಸುಟ್ಟು ಕರಕಲಾದ ಬಸ್ಸನ್ನು ಕ್ರೇನ್ ಮೂಲಕ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಎಂಜಿನ್ನಲ್ಲಿನ ಶಾರ್ಟ್ ಸರ್ಕ್ಯೂಟ್ ಅಥವಾ ಮೆಕ್ಯಾನಿಕಲ್ ವೈಫಲ್ಯವೇ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. “ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ, ತಾಂತ್ರಿಕ ತಂಡದಿಂದ ತನಿಖೆ ನಡೆಸಿ ನಿಖರ ಕಾರಣ ತಿಳಿಯಲಾಗುವುದು” ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.