ಹೈದರಾಬಾದ್, ಏಪ್ರಿಲ್ 18:ತೆಲಂಗಾಣದ ಹೈದರಾಬಾದ್ನ ಕೂಕಟ್ಪಲ್ಲಿ ಹೌಸಿಂಗ್ ಬೋರ್ಡ್ (KPHB) ಕಾಲೋನಿ ಸಮೀಪ ಶುಕ್ರವಾರ ರಾತ್ರಿ ಖಾಸಗಿ ಎಸಿ ಸ್ಲೀಪರ್ ಬಸ್ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬಸ್ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ 18 ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶುಕ್ರವಾರ (ಏಪ್ರಿಲ್ 17) ರಾತ್ರಿ ಸುಮಾರು 10:45 ರ ಸಮಯದಲ್ಲಿ ಶ್ರೀ ದುರ್ಗಾ ಮಹೇಶ್ವರಿ ಟ್ರಾವೆಲ್ಸ್ಗೆ ಸೇರಿದ ಬಸ್ ಮಿಯಾಪುರದಿಂದ ಆಂಧ್ರಪ್ರದೇಶದ ಪಾಲಕೊಲ್ಲು ಕಡೆಗೆ ಹೊರಟಿತ್ತು. ಬಸ್ ಕೆಪಿಎಚ್ಬಿ ಮೆಟ್ರೋ ಪಿಲ್ಲರ್ ಸಂಖ್ಯೆ 734 ರ ಸಮೀಪದ ಪದ್ಮಾವತಿ ಪ್ಲಾಜಾ ಬಳಿ ತಲುಪುತ್ತಿದ್ದಂತೆ ಚಾಲಕನ ಕ್ಯಾಬಿನ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಕ್ಯಾಬಿನ್ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸುವ ಮೊದಲೇ ಸಿಬ್ಬಂದಿ ಎಲ್ಲಾ ಪ್ರಯಾಣಿಕರನ್ನು ತುರ್ತಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಪ್ರಯಾಣಿಕರು ಕೆಳಗಿಳಿದ ಕೆಲವೇ ನಿಮಿಷಗಳಲ್ಲಿ ಬೆಂಕಿ ಕೆನ್ನಾಲಗೆ ಇಡೀ ವಾಹನವನ್ನು ಆವರಿಸಿ, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಈ ಅವಘಡದಿಂದಾಗಿ ಹೈದರಾಬಾದ್ನ ಪ್ರಮುಖ ರಸ್ತೆಯಾದ ಕೆಪಿಎಚ್ಬಿಯಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.