ಮಂಡ್ಯದ ಕರಿಘಟ್ಟ ಅರಣ್ಯಕ್ಕೆ ಬೆಂಕಿ: ಭಾರಿ ಪ್ರಮಾಣದಲ್ಲಿ ಮರ ಪ್ರಾಣಿ ಸಂಕುಲ ನಾಶ

ಮೈಸೂರು, ಫೆಬ್ರವರಿ 24 :ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕರೀಘಟ್ಟ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಪ್ರದೇಶದ ಅರಣ್ಯ ಸುಟ್ಟು ಬೂದಿಯಾಗಿದೆ.

ಅರಣ್ಯ ಇಲಾಖೆ. ಅಗ್ನಿಶಾಮಕದೆಳ ಸಿಬ್ಬಂದಿಯಿಂದ ಬೆಂಕಿ‌ ನಂದಿಸಲು ಹರಸಾಹಸ ನಡೆಯುತ್ತಿದ್ದು, ಬೆಂಕಿ ನಂದಿಸಲು ಇದುವರೆಗೆ ಮಾಡಿದ ಪ್ರಯತ್ನಗಳು ವಿಫಲವಾಗಿದೆ.

ಬೆಂಕಿಯಿಂದ ಮರ-ಗಿಡ, ಪ್ರಾಣಿ-ಪಕ್ಷಿ ಸಂಕುಲಕ್ಕೂ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಕಿಡಿಗೇಡಿಗಳು ಈ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಪಕ್ಕದ ಶ್ರೀನಿವಾಸನ ಜಾತ್ರೆ ನಡೆದಿದೆ.

ಈ ಜಾತ್ರೆ ಸಂದರ್ಭದಲ್ಲಿ ಹಿಂದೆ ಮತ್ತು ಮುಂದಿನ ದಿನಗಳಲ್ಲಿ ಬೆಟ್ಟಕ್ಕೆ ಬೆಂಕಿ ಹಚ್ಚೋದು ವಾಡಿಕೆಯಾಗಿದ್ದು, ಈ ಬಗ್ಗೆನೂ ತನಿಖೆ ನಡೆಸಲಾಗುತ್ತಿದೆ.

ಅರಣ್ಯ ಸಚಿವ ಸತೀಶ್ ಜಾರಕಿಹೋಲಿ ಅವರು ಬೆಂಕಿ ಬಿದ್ದ ಪ್ರದೇಶವನ್ನು ಪರಿಶೀಲನೆ ನಡೆಸಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.