ಚಾಮರಾಜನಗರ, ಏಪ್ರಿಲ್ 29: ಚಿನ್ನಾಭರಣದ ವಿಚಾರಕ್ಕೆ ಮದುವೆ ಮನೆಯಲ್ಲಿ ಮಾರಾಮಾರಿ ನಡೆದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. 70 ಗ್ರಾಂ ಚಿನ್ನದ ವ್ಯತ್ಯಾಸಕ್ಕಾಗಿ ವಧು-ವರರ ಕಡೆಯವರು ಬೀದಿ ಕಾಳಗಕ್ಕಿಳಿದಿದ್ದು, ಚಾಕು ಇರಿತದಂತಹ ಘಟನೆ ನಡೆದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಕೊಳ್ಳೇಗಾಲದ ಆರ್.ಎಸ್. ಫಂಕ್ಷನ್ ಹಾಲ್ನಲ್ಲಿ ಬುಧವಾರ ಮದುವೆ ನಿಶ್ಚಯವಾಗಿತ್ತು. ಮಂಗಳವಾರ ರಾತ್ರಿ ನಡೆದ ಅರಶಿಣ ಶಾಸ್ತ್ರದ ಕಾರ್ಯಕ್ರಮಕ್ಕೆ ವರನ ಕಡೆಯವರು ತಡವಾಗಿ ಬಂದಿದ್ದು ಮೊದಲ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ನಡುವೆ, ವಧುವಿನ ಕುಟುಂಬಸ್ಥರು ಒಪ್ಪಂದದಂತೆ 100 ಗ್ರಾಂ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ವರನ ಕಡೆಯವರು ಕೇವಲ 30 ಗ್ರಾಂ ಚಿನ್ನ ತಂದಿರುವುದು ತಿಳಿಯುತ್ತಿದ್ದಂತೆ ವಾಗ್ವಾದ ತಾರಕಕ್ಕೇರಿತು.
ಬುಧವಾರ ಮುಂಜಾನೆ ಪರಿಸ್ಥಿತಿ ತಿಳಿಗೊಳಿಸಲು ವರನ ಸಂಬಂಧಿ ಮಾತುಕತೆಗೆ ಮುಂದಾದರು. ಈ ವೇಳೆ ಮಾತಿಗೆ ಮಾತು ಬೆಳೆದು, ತಮಿಳುನಾಡಿನಿಂದ ಬಂದಿದ್ದ ವಧುವಿನ ಸಂಬಂಧಿಕರು ರೊಚ್ಚಿಗೆದ್ದು ವರನ ಕಡೆಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಗಲಾಟೆ ಜೋರಾಗಿದೆ. ಘಟನೆಯಲ್ಲಿ ಎರಡೂ ಕಡೆಯ ಸುಮಾರು ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆ ಹಾಗೂ ಚಾಮರಾಜನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿವೈಎಸ್ಪಿ ಧರ್ಮೇಂದ್ರ, “ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ. ಈ ಹಿಂಸಾಚಾರದ ಹಿನ್ನೆಲೆಯಲ್ಲಿ ನಿಶ್ಚಯವಾಗಿದ್ದ ವಿವಾಹ ಕಾರ್ಯಕ್ರಮವನ್ನು ಎರಡೂ ಕುಟುಂಬದವರು ರದ್ದುಗೊಳಿಸಿದ್ದಾರೆ.