LATEST NEWS
ಆರ್ ಟಿಐ ಕಾರ್ಯಕರ್ತ ಶಂಕರ ಶಾಂತಿ ಮೇಲೆ ಹಲ್ಲೆ ಪ್ರಕರಣ – ಕಲ್ಕುಡ ದೈವದ ಎದುರೇ ಕಿತ್ತಾಡಿಕೊಂಡ ಎರಡು ತಂಡ
ಉಡುಪಿ ಮಾರ್ಚ್ 27: ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿ ಹಲ್ಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಬಾರ್ಕೂರಿನ ಕಾಳಿಕಾಂಬ ದೇವಸ್ಥಾನದ ಕಲ್ಕುಡ ಕ್ಷೇತ್ರದಲ್ಲಿ ಕಲ್ಕುಡ ದೈವದ ಎದುರೇ ಎರಡು ಗಂಪುಗಳ ಕಚ್ಚಾಡಿಕೊಂಡ ಘಟನೆ ನಡೆದಿದೆ.
ಸರಕಾರಿ ಕಬಳಿಕೆ ವಿರುದ್ದ ಹೋರಾಟ ನಡೆಸುತ್ತಿದ್ದ ಆರ್ ಟಿಐ ಕಾರ್ಯಕರ್ತ ಶಂಕರ ಶಾಂತಿ ಅವರ ಮೇಲೆ ಕಳೆದ ಕೆಲವು ತಿಂಗಳ ಹಿಂದೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಕಾಳಿಕಾಂಬ ದೇವಸ್ಥಾನದಲ್ಲಿ ದಾಳಿ ನಡೆಸಿದ್ದ ದುಷ್ಕರ್ಮಿಗಳು ಕಾಲು ಕೈ ಮುರಿದು ಹಾಕಿ, ಕೊಲೆಗೆ ಯತ್ನ ನಡೆಸಿದ್ದರು.
ಈ ನಡುವೆ ಕಳೆದ ವಾರ ನನ್ನ ಮೇಲೆ ಹಲ್ಲೆ ನಡೆಸಿದವರು ಸರ್ವನಾಶವಾಗಲಿ ಎಂದು ಆರ್ ಟಿ ಐ ಕಾರ್ಯಕರ್ತ ಶಂಕರ ಶಾಂತಿ ಉಡುಪಿಯ ಬಾರ್ಕೂರು ಕಾಳಿಕಾಂಬಾ ದೇವಸ್ಥಾನದಲ್ಲಿ ಶಾಪ ಹಾಕಿ ಕಾಯಿ ಒಡೆದಿದ್ದಾರೆ.
ಇದೀಗ ಮತ್ತೆ ಈ ವಿಚಾರ ಕಚ್ಚಾಟಕ್ಕೆ ತಿರುಗಿದ್ದು, ವಿಶ್ವಕರ್ಮ ಸಮುದಾಯ ಆರಾಧಿಸುವ ಬಾರ್ಕೂರಿನ ಕಾಳಿಕಾಂಬ ದೇವಸ್ಥಾನದ ಕಲ್ಕುಡ ಕ್ಷೇತ್ರದಲ್ಲಿ ನಡೆದ ಕಲ್ಕುಡ ದೈವದ ಕೋಲದಲ್ಲಿ ಕೋಲಾಹಲ ಉಂಟಾಗಿದೆ.
ವಿಶ್ವಕರ್ಮ ಸಮುದಾಯದವರೇ ಆರ್ ಟಿಐ ಕಾರ್ಯಕರ್ತ ಶಂಕರನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ, ಕ್ಷೇತ್ರದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆಡಳಿತ ಮಂಡಳಿಯ ಪ್ರಮುಖರಿಂದ ದೈವಕ್ಕೆ ದೂರು ನೀಡಲಾಯಿತು. ಈ ಸಂದರ್ಭ ಸಮುದಾಯದ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕ್ಷೇತ್ರದ ವಿರುದ್ಧ ಪಿತೂರಿ ಮಾಡಿಲ್ಲ ಎಂದು ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡುವಂತೆ ಒಂದು ಗುಂಪು ಒತ್ತಾಯ ಮಾಡಿದರೆ. ಇನ್ನೊಂದು ಗುಂಪು ಶಂಕರ ಶಾಂತಿಗೆ ಹಲ್ಲೆ ನಡೆಸಿಲ್ಲ ಎಂದು ಪ್ರಮಾಣ ಮಾಡುವಂತೆ ಮತ್ತೊಂದು ತಂಡದ ಆಗಹಿಸಿತು.
ಈ ವಿಚಾರದಲ್ಲಿ ದೈವ ಪಾತ್ರಿಯ ಮುಂದೆಯೇ ಸಮುದಾಯದ ನಾಯಕರುಗಳು ಕಚ್ಚಾಡಿಕೊಂಡಿದ್ದಾರೆ. ಸಮಸ್ಯೆ ಬಗೆಹರಿಯಲು ಮುಂದಾದ ದೈವ ಪಾತ್ರಿಯೂ ಗಲಾಟೆ ನೋಡಿ ತಬ್ಬಿಬಾಗ ಬೇಕಾದ ಪರಿಸ್ಥಿತಿ ಬಂದಿತ್ತು.