ಶಿವಮೊಗ್ಗ, ಜೂನ್ 11: ಬೆಕ್ಕುಗಳ ನಡುವಿನ ಜಗಳ ಅಕ್ಕಪಕ್ಕದ ಮನೆಯವರ ನಡುವೆ ಮಾರಾಮಾರಿ ತಂದಿಟ್ಟಿರುವ ವಿಚಿತ್ರ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ. ಬೆಕ್ಕುಗಳ ಕಿತ್ತಾಟದಿಂದ ಆರಂಭವಾದ ಈ ರಾದ್ಧಾಂತವು ಎರಡು ಕುಟುಂಬಗಳ ನಡುವಿನ ಹೊಡೆದಾಟಕ್ಕೆ ಕಾರಣವಾಗಿದ್ದು, ಪೊಲೀಸರು ಬರೋಬ್ಬರಿ 20 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಆಗುಂಬೆ ಸಮೀಪದ ಮೇಗರವಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ನಾಗಪಾತ್ರಿ ರಾಜಶೇಖರ್ ಎಂಬುವವರು ವಿದೇಶಿ ತಳಿಯ ಬೆಕ್ಕೊಂದನ್ನು ಸಾಕುತ್ತಿದ್ದಾರೆ. ಇವರ ನೆರೆಮನೆಯಲ್ಲಿರುವ ನಾಗರಾಜ್ ಎಂಬುವವರ ಮನೆಯಲ್ಲಿ ಸ್ವದೇಶಿ (ನಾಟಿ) ಬೆಕ್ಕಿದೆ. ಕಳೆದ ಕೆಲವು ದಿನಗಳ ಹಿಂದೆ ಈ ಎರಡು ಬೆಕ್ಕುಗಳ ನಡುವೆ ಜಗಳ ನಡೆದಿದ್ದು, ನಾಗರಾಜ್ ಅವರ ಮನೆಯ ಬೆಕ್ಕು ರಾಜಶೇಖರ್ ಅವರ ವಿದೇಶಿ ಬೆಕ್ಕಿಗೆ ಕಚ್ಚಿದೆ ಎನ್ನಲಾಗಿದೆ.
ನನ್ನ ಬೆಕ್ಕಿಗೆ ನಿಮ್ಮ ಬೆಕ್ಕು ಕಚ್ಚಿದೆ ಎಂಬ ವಿಚಾರವಾಗಿ ರಾಜಶೇಖರ್ ಮತ್ತು ನಾಗರಾಜ್ ಕುಟುಂಬದ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕ್ಷಣಾರ್ಧದಲ್ಲೇ ಉಭಯ ಕುಟುಂಬಗಳ ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಟಕ್ಕಿಳಿದಿದ್ದಾರೆ.
ಈ ಗಲಾಟೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರಡೂ ಕುಟುಂಬಗಳು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರುಗಳನ್ನು ದಾಖಲಿಸಿವೆ. ಒಟ್ಟು 20 ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಬೆಕ್ಕುಗಳ ಜಗಳ ನೋಡಲು ತಮಾಷೆಯಾಗಿರುತ್ತದೆ, ಆದರೆ ಇಲ್ಲಿ ಬೆಕ್ಕುಗಳ ಜಗಳವು ಮಾಲೀಕರನ್ನು ಜೈಲು ಮತ್ತು ಆಸ್ಪತ್ರೆ ಅಲೆಯುವಂತೆ ಮಾಡಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.