ಬೆಂಗಳೂರು, ಏಪ್ರಿಲ್ 02: ಕಾಫಿ ಶಾಪ್ ಬಳಿ ಬಹಿರಂಗವಾಗಿ ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನಲೆ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಕೊತ್ತನೂರಿನ ಭಾರತಿ ಸಿಟಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಹೆಣ್ಣೂರು ಭಾಗದಿಂದ ಬಂದಿದ್ದ ಕೆಲ ಯುವಕರು ಇಲ್ಲಿನ ಪ್ರಸಿದ್ಧ ಕಾಫಿ ಶಾಪ್ ಒಂದರ ಬಳಿ ಅನುಮಾನಾಸ್ಪದವಾಗಿ ಜಮಾಯಿಸಿದ್ದರು. ಈ ವೇಳೆ ಯುವಕರು ಸಿರಿಂಜ್ ಮೂಲಕ ಡ್ರಗ್ಸ್ ಇಂಜೆಕ್ಟ್ ಮಾಡಿಕೊಳ್ಳುತ್ತಿರುವುದು ಹೋಟೆಲ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಯುವಕರ ಈ ವರ್ತನೆಯ ಬಗ್ಗೆ ಅವರ ಪೋಷಕರಿಗೂ ಮಾಹಿತಿ ಮುಟ್ಟಿಸಿದ್ದಾರೆ ಎನ್ನಲಾಗಿದೆ.
ತಮ್ಮ ಕೃತ್ಯವನ್ನು ಪ್ರಶ್ನಿಸಿದ್ದರಿಂದ ಕೆರಳಿದ ಯುವಕರ ಗುಂಪು ಹೋಟೆಲ್ ಸಿಬ್ಬಂದಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹೋಟೆಲ್ ಸಿಬ್ಬಂದಿಯೂ ತಿರುಗಿಬಿದ್ದಿದ್ದು, ಸ್ಥಳವು ಕೆಲ ಕಾಲ ರಣರಂಗವಾಗಿ ಮಾರ್ಪಟ್ಟಿತ್ತು. ಕುರ್ಚಿಗಳು, ಟೇಬಲ್ಗಳು ಸೇರಿದಂತೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ಎರಡೂ ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ಘಟನೆಯಲ್ಲಿ ಎರಡೂ ಕಡೆಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕೊತ್ತನೂರು ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪು ಪರಸ್ಪರ ದೂರು ನೀಡಿದ್ದು, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.