ಉಜಿರೆ, ಮಾರ್ಚ್ 04: ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಶಾಲಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಫಾ. ಅಬೆಲ್ ಲೋಬೊ ವಹಿಸಿ, ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಹಾಗೂ ಜೀವನ ಪಯಣ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಪ್ರಾಂಶುಪಾಲರಾದ ಫಾ. ವಿಜಯ್ ಲೋಬೊ ಮಾತನಾಡಿ, ಕುಟುಂಬದೊಂದಿಗೆ ಒಗ್ಗಟ್ಟಾಗಿ ಬದುಕುವುದು ಮುಖ್ಯವಾದರೂ ಸಂಕಷ್ಟಗಳು ಎದುರಾದಾಗ ಧೈರ್ಯದಿಂದ ಒಬ್ಬಂಟಿಯಾಗಿ ಎದುರಿಸುವ ಮನೋಬಲವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಜಗತ್ತಿನ ಬೆಳಕಾಗಲಿ ಎಂಬ ಆಶಯದೊಂದಿಗೆ ದೀಪ ಪ್ರಧಾನ ಮಾಡಲಾಯಿತು. 9ನೇ ತರಗತಿಯ ವಿದ್ಯಾರ್ಥಿನಿ ಜಾಹ್ನವಿ ಕಿರಿಯ ವಿದ್ಯಾರ್ಥಿಗಳ ಪರವಾಗಿ ಶುಭಾಶಯಗಳನ್ನು ತಿಳಿಸಿದರು. ಕಿರಿಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಗೆ 10ನೇ ತರಗತಿ ವಿದ್ಯಾರ್ಥಿಗಳು ಕಾಣಿಕೆಯಾಗಿ ವಿಶೇಷ ಉಡುಗೊರೆಯನ್ನು ಅರ್ಪಿಸಿದರು.

ಕುಮಾರಿ ಸ್ನೇಹಲ್ ಅಡ್ಲಿನ್ ಡಿ’ಸೋಜ ಅವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಗನ್ ಡಿ ಸ್ವಾಗತಿಸಿದರು. ಪಂಚಮ್ ವಂದಿಸಿದರು. ಕಾರ್ಯಕ್ರಮಕ್ಕೆ 9ನೇ ತರಗತಿಯ ಸಹಶಿಕ್ಷಕ  ಗಣೇಶ್ ಹಾಗೂ ಸಹಶಿಕ್ಷಕಿ  ಮೇರಿ ಟಿ.ಎಂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

Share Information