ಬೆಂಗಳೂರು, ಡಿಸೆಂಬರ್ 16: ತನ್ನ ಮಗಳಿಗಾಗಿ ಕಿರುತೆರೆ ನಟಿ ಪತ್ನಿ ಚೈತ್ರಾಳನ್ನು ಆಕೆಯ ಪತಿ ಹಾಗೂ ನಿರ್ಮಾಪಕ ಹರ್ಷವರ್ಧನ್ ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಿರ್ಮಾಪಕರೊಬ್ಬರು ಮಗಳಿಗಾಗಿ ಪತ್ನಿಯನ್ನು ಅಪಹರಣ ಮಾಡಿರುವ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ನಿನ್ನಲೇನೋ ಹೇಳಬೇಕು’ ಎಂಬ ಸಿನಿಮಾದ ನಿರ್ಮಾಪಕ ಹರ್ಷವರ್ಧನ್ ತಮ್ಮ ಪತ್ನಿ, ಕಿರುತೆರೆ ನಟಿ ಚೈತ್ರಾ ಎಂಬುವವರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.
2023ರಲ್ಲಿ ಕಿರುತೆರೆ ನಟಿ ಚೈತ್ರಾ ಎಂಬವರನ್ನು ನಿರ್ಮಾಪಕ ಹರ್ಷವರ್ಧನ್ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ವರ್ಷದ ಮಗುವಿದೆ. ಇದೀಗ ಮಗಳಿಗಾಗಿ ಪತ್ನಿಯನ್ನು ಅಪಹರಣ ಮಾಡಿರುವ ಆರೋಪ ಹರ್ಷವರ್ಧನ್ ವಿರುದ್ಧ ಕೇಳಿ ಬಂದಿದೆ. ಪತ್ನಿಯನ್ನ ಕಿಡ್ನಾಪ್ ಮಾಡಿ, ನಿನ್ನ ಮಗಳು ಬೇಕು ಅಂದ್ರೆ ನನ್ನ ಮಗಳನ್ನ ಕೊಡು ಎಂದು ಅತ್ತೆಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಮಗುವಾದ ಬಳಿಕ ಕೌಟುಂಬಿಕ ಕಲಹ ಹಿನ್ನೆಲೆ ಹರ್ಷವರ್ಧನ್ ಮತ್ತು ಚೈತ್ರಾ ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ್ದರು. ಮುದ್ದಿನ ಮಗಳನ್ನು ಬಿಟ್ಟಿರಲು ಆಗದೇ ಪತ್ನಿಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.