ಉಪ್ಪಿನಂಗಡಿ ನವೆಂಬರ್ 26: ಆವರಣಗೊಡೆಯೊಂದು ಕುಸಿದು ಬಿದ್ದ ಪರಿಣಾಮ ಪಕ್ಕದ ಮನೆಯ ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡ ಘಟನೆ 34 ನೆಕ್ಕಿಲಾಡಿಯ ಸುಭಾಶ್‌ನಗರದ ಜನತಾ ಕಾಲನಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಮೆಸ್ತ್ರೀಯೊಬ್ಬರ ಸಮಯ ಪ್ರಜ್ಞೆಯಿಂದ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.


ಇಲ್ಲಿನ ಜಬ್ಬಾರ್ ಎಂಬವರು ತನ್ನ ಮನೆಯನ್ನು ನಂದಾವರದ ಇಲ್ಯಾಸ್ ಎಂಬವರಿಗೆ ಬಾಡಿಗೆಗೆ ನೀಡಿದ್ದರು. ಅವರು ನವೆಂಬರ್ 24ರಂದು ಇಲ್ಯಾಸ್‌ರ ಕುಟುಂಬ ಈ ಮನೆಗೆ ಬಂದಿದ್ದು, ಕುಟುಂಬ ಹಾಗೂ ಬಂದ ನೆಂಟರಿಷ್ಟರಿಗೆ ಸಂಜೆ ಅಡುಗೆ ಕೋಣೆಯಲ್ಲಿ ಔತಣದ ತಯಾರಿ ನಡೆಯುತ್ತಿತ್ತು. ಈ ಮನೆಯ ಹಿಂಬದಿ ಎತ್ತರದ ಜಾಗದಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಸುಶೀಲಾ ಎಂಬವರಿಗೆ ಸೇರಿದ ಮನೆಯಿದ್ದು, ಸುಮಾರು 10 ದಿನಗಳಿಂದ ಇದಕ್ಕೆ ಆವರಣಗೋಡೆ ಕಟ್ಟುವ ಕೆಲಸಗಳು ನಡೆಯುತ್ತಿತ್ತು.

ನವೆಂಬರ್ 24ರಂದು ಸಂಜೆ ಸುಮಾರು ಐದು ಗಂಟೆಯ ವೇಳೆಗೆ ಆವರಣ ಗೋಡೆ ಕುಸಿಯುವ ಲಕ್ಷಣಗಳು ಗೋಚರಿಸಿದ್ದು, ಇದನ್ನು ಕಂಡ ಮೇಸ್ತ್ರಿ ಬೊಬ್ಬೆ ಹಾಕಿ ಕೆಳಗಿನ ಮನೆಯವರನ್ನು ಮನೆಯಿಂದ ಹೊರಗೆ ಓಡುವಂತೆ ಎಚ್ಚರಿಸಿದ್ದಾರೆ. ಈ ವೇಳೆ ಅಡುಗೆ ಕೋಣೆಯಲ್ಲಿದ್ದವರೆಲ್ಲಾ ಹೊರಗೋಡಿ ಬಂದಿದ್ದರು. ಕ್ಷಣಾರ್ಧದಲ್ಲಿ ದರೆ ಸಹಿತ ಆವರಣಗೋಡೆ ಕುಸಿದು ಕೆಳಗಿನ ಮನೆಯ ಅಡುಗೆ ಕೋಣೆ ಮೇಲೆ ಬಿದ್ದಿದೆ. ಇದರಿಂದ ಜಬ್ಬಾರ್ ಅವರ ಮನೆಯ ಅಡುಗೆ ಕೋಣೆ ಸಂಪೂರ್ಣ ಧ್ವಂಸವಾಗಿದ್ದು, ಮನೆಗೂ ಹಾನಿಯಾಗಿದೆ.
ಮನೆಯಲ್ಲಿದ್ದ ಫ್ರಿಡ್ಜ್, ಗ್ಯಾಸ್, ಗ್ಯಾಸ್ ಸ್ಟವ್, ಪಾತ್ರೆಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಮನೆಯಲ್ಲಿ ಇಲ್ಯಾಸ್‌ ಅವರ ಕುಟುಂಬ ಸದಸ್ಯರಲ್ಲದೆ, ನೆಂಟರಿಷ್ಟರೂ ಇದ್ದು, 7 8 ಮಕ್ಕಳೂ ಇದ್ದರು. ಹೆಚ್ಚಿನವರು ಅಡುಗೆ ಕೋಣೆಯಲ್ಲಿ ಔತಣ ತಯಾರಿಸುವ ಕೆಲಸದಲ್ಲಿದ್ದರು.

ಮೇಲಿನ ಮನೆ ಯಲ್ಲಿ ಆವರಣ ಗೋಡೆ ಕಟ್ಟುತ್ತಿದ್ದ ಮೇಸ್ತ್ರಿ ನೀಡಿದ ಎಚ್ಚರಿಕೆಯ ಮೇರೆಗೆ ಇವರೆಲ್ಲಾ ಮನೆಯಿಂದ ಹೊರಗೋಡಿ ಬಂದಿದ್ದರಿಂದ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

Share Information