ಕೊಲ್ಲೂರು, ಡಿಸೆಂಬರ್ 21: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಂಬಂಧಿಸಿದಂತೆ ರೂಮ್ ಬುಕ್ಕಿಂಗ್ ಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಠಿಸಿ ಭಕ್ತರಿಂದ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಾಜಸ್ಥಾನ ರಾಜ್ಯದ ತಿಜಾರಿ ಜಿಲ್ಲೆಯ ನಾಸೀರ್ ಹುಸೇನ್(21) ಎಂದು ಗುರುತಿಸಲಾಗಿದೆ. ಈತ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಅನ್ನು ಹೊಲುವ ನಕಲಿ ವೆಬ್ ಸೈಟ್ ಸೃಷ್ಠಿಸಿ ದೇವಸ್ಥಾನದ ಭಕ್ತಾಧಿಗಳಿಂದ ಮುಂಗಡವಾಗಿ ರೂಮ್ ಬುಕಿಂಗ್ ಮಾಡಿಸುವ ಬಗ್ಗೆ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚನೆ ಮಾಡುತ್ತಿದ್ದನು. ಈ ಬಗ್ಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಕಾರ್ಯಾನಿರ್ವಹಣಾಧಿಕಾರಿ ನೀಡಿದ ದೂರಿನಂತೆ ನ.3ರಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ತಂಡ, ಆರೋಪಿಯನ್ನು ಡಿಸೆಂಬರ್ 19ರಂದು ಬಂಧಿಸಿ, ಆತನಿಂದ ಕೃತ್ಯಕ್ಕೆ ಬಳಸಿದ ಲ್ಯಾಪ್‌ಟಾಪ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಡಿಸೆಂಬರ್ 20ರಂದು ಆರೋಪಿಯನ್ನು ಬೈಂದೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.



