ಬೆಳಗಾವಿ ಫೆಬ್ರವರಿ 06: ಮಹಿಳಾ ಅಧಿಕಾರಿಯೊಬ್ಬರ ಮನೆಯ ಬೆಡ್ ರೂಮ್ ನಲ್ಲಿ ಕ್ಯಾಮರಾ ಇಟ್ಟು ಅವರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಬಳಿಕ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ಪತ್ರಕರ್ತರನ್ನ ಬೆಳಗಾವಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಗೋಕಾಕ್ ನಗರದ ಜಲಾಲ್ ಗಲ್ಲಿಯ ಸಮೀರ್ ನಿಸಾರ್ ಅಹ್ಮದ್ ಶೇಖ್, ಗೋಕಾಕ್ ಹೊರವಲಯದ ಯೋಗಿಕೊಳ್ಳದ ಅಬ್ಬುಲ್ರಶೀದ್ ಮಕಾಂದಾರ್, ಘಟಪ್ರಭಾ ನಿವಾಸಿ ಮೊಹಮ್ಮದ್ ದಿಲಾವರ್ ಬಾಲೇಕುಂದ್ರಿ ಬಂಧಿತರು ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಮಹಿಳಾ ಅಧಿಕಾರಿಯ ಮನೆ ಕೆಲಸದವನ ಪಾತ್ರವೂ ಬೆಳಕಿಗೆ ಬಂದಿದೆ. ಮನೆ ಕಿಟಕಿಯಲ್ಲಿ ಬೀಗದ ಕೀಲಿಕೈಯನ್ನು ಇಡುವ ವಿಚಾರವನ್ನು ತಿಳಿದಿದ್ದ ಆತ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಮಹಿಳಾ ಅಧಿಕಾರಿ ಕೀಲಿಕೈ ಕಿಟಕಿಯಲ್ಲಿ ಇಟ್ಟು ಹೋಗಿದ್ದಾಗ ಮನೆ ಕೆಲಸದಾತ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಅದರಂತೆ, ಸಮಯ ನೋಡಿ ಮನೆಗೆ ನುಗ್ಗಿದ್ದ ಆರೋಪಿಗಳು ಬೆಡ್ರೂಮ್ ಹಾಗೂ ಹಾಲ್ನಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿದ್ದರು. ಆ ಮೂಲಕ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ನಂತರ ತೆಗೆದುಕೊಂಡು ಹೋಗಿದ್ದರು.
ಮನೆಗೆ ನುಗ್ಗಿ ಬೆಡ್ ರೂಮ್ ನಲ್ಲಿದ್ದ ಲೈಟಿಂಗ್ ವೋಲ್ಟರ್ಗಳಲ್ಲಿ ರಹಸ್ಯ ಕ್ಯಾಮೆರಾ (Hidden Camera) ಅಳವಡಿಸಿದ್ದ ಕಿರಾತಕರು ಖಾಸಗಿ ದೃಶ್ಯ ಸೆರೆಯಾದ ಬಳಿಕ ಮಹಿಳಾ ಅಧಿಕಾರಿಗೆ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು .ಹಣ ಕೊಡದಿದ್ದರೇ ಸೋಷಿಯಲ್ ಮಿಡಿಯಾದಲ್ಲಿ ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆಯೊಡ್ಡಿದ್ದರು. ನಕಲಿ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಕಮೀಷನರ್ ಮೊರೆಯನ್ನ ಮಹಿಳಾ ಅಧಿಕಾರಿ ಹೋಗಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಬ್ಲ್ಯಾಕ್ಮೇಲ್ ಮಾಡ್ತಿದ್ದ ಮೂವರು ನಕಲಿ ಪತ್ರಕರ್ತರನ್ನ (Fake Journalists) ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಹಡೆಮುರಿಕಟ್ಟಿದ್ದಾರೆ.