ಯಾದಗಿರಿ,ಮಾರ್ಚ್ 29: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಸ್ವಂತ ಪತಿಯನ್ನೇ ಪತ್ನಿ ಸುಪಾರಿ ನೀಡಿ ಕೊಲೆ ಮಾಡಿಸಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೊಲೆಯನ್ನು ಅಪಘಾತ ಎಂದು ಬಿಂಬಿಸಿ ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ ಪತ್ನಿ, ಪ್ರಿಯತಮ ಹಾಗೂ ಹಂತಕ ಈಗ ಕಂಬಿ ಎಣಿಸುತ್ತಿದ್ದಾರೆ.

ಯಾದಗಿರಿ ತಾಲೂಕಿನ ಚಾಮನಹಳ್ಳಿ ತಾಂಡಾ ನಿವಾಸಿ, ಆಟೋ ಚಾಲಕ ಸಾಗರ್ ರಾಠೋಡ್ (35) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪೂಜಾ, ಆಕೆಯ ಪ್ರಿಯತಮ ರೆಡ್ಡಿ ರಾಠೋಡ್ ಮತ್ತು ಸುಪಾರಿ ಹಂತಕ ಮಹೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಪೂಜಾ ಹಾಗೂ ಅದೇ ಊರಿನ ರೆಡ್ಡಿ ರಾಠೋಡ್ ನಡುವೆ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ಹಿಂದೆ ಪೂಜಾ ಮೂರು ಬಾರಿ ಪ್ರಿಯತಮನ ಜೊತೆ ಓಡಿಹೋಗಿದ್ದಳು. ಗ್ರಾಮಸ್ಥರು ಹಾಗೂ ಹಿರಿಯರು ಪಂಚಾಯತಿ ನಡೆಸಿ ಬುದ್ಧಿ ಹೇಳಿದ್ದರೂ ಇವರ ನಡವಳಿಕೆಯಲ್ಲಿ ಬದಲಾವಣೆಯಾಗಿರಲಿಲ್ಲ. ತಮ್ಮ ಸಂಬಂಧಕ್ಕೆ ಸಾಗರ್ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ ಇಬ್ಬರು, ಆತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಸಾಗರ್ನನ್ನು ಮುಗಿಸಲು ಆರೋಪಿಗಳು ಮಹೇಶ್ ಎಂಬಾತನಿಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿದ್ದರು. ಮಾರ್ಚ್ 22ರ ರಾತ್ರಿ ಬಾಡಿಗೆ ಇದೆ ಎಂದು ಸುಳ್ಳು ಹೇಳಿ ಸಾಗರ್ನನ್ನು ಆಟೋ ಸಮೇತ ಲಿಂಗೇರಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ಸಾಗರ್ ಮೇಲೆ ಸುತ್ತಿಗೆಯಿಂದ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.
ಕೊಲೆಯ ನಂತರ ಪ್ರಕರಣವನ್ನು ದಿಕ್ಕು ತಪ್ಪಿಸಲು ಆರೋಪಿಗಳು ದೊಡ್ಡ ಡ್ರಾಮಾ ಮಾಡಿದ್ದರು. ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಹೊಸಹಳ್ಳಿ ಬಳಿ ತಂದು, ಅಲ್ಲಿ ಆಟೋಗೆ ಕಾರಿನಿಂದ ಡಿಕ್ಕಿ ಹೊಡೆಸಲಾಗಿತ್ತು. ಸಾಗರ್ ಅಪಘಾತದಿಂದಲೇ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಈ ಸೀನ್ ಕ್ರಿಯೇಟ್ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಯಾದಗಿರಿ ಗ್ರಾಮಾಂತರ ಪೊಲೀಸರಿಗೆ ಮೇಲ್ನೋಟಕ್ಕೆ ಇದು ಅಪಘಾತವಲ್ಲ ಎಂಬ ಸಂಶಯ ಮೂಡಿದೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಸಾಗರ್ನ ಮೊಬೈಲ್ ಕರೆಗಳ ದಾಖಲೆ (CDR) ಪರಿಶೀಲಿಸಿದಾಗ, ಕೊನೆಯದಾಗಿ ಮಹೇಶ್ ಎಂಬಾತ ಕರೆ ಮಾಡಿರುವುದು ಪತ್ತೆಯಾಗಿದೆ. ಕೂಡಲೇ ಮಹೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಸಂಪೂರ್ಣ ರಹಸ್ಯ ಬಯಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹೆಚ್ಚಿನ ತನಿಖೆ ಮುಂದುವರಿದಿದೆ.