ಧಾರವಾಡ,ಮಾರ್ಚ್ 24: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕನ ಪುತ್ರ, ಧಾರವಾಡ ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಕಾರಿನೊಳಗೆ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಎಂದು ಗುರುತಿಸಲಾಗಿದೆ.

ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಹಳಿ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ದುಷ್ಕರ್ಮಿಗಳು ಕಾರಿಗೆ ಬೆಂಕಿ ಹಚ್ಚಿದ್ದರಿಂದ, ಒಳಗಿದ್ದ ರಾಜು ಬೋಳಶೆಟ್ಟಿ ಅವರ ದೇಹವು ಗುರುತು ಸಿಗದಷ್ಟು ಸುಟ್ಟು ಕರಕಲಾಗಿದೆ. ಘಟನಾ ಸ್ಥಳದ ಭೀಕರತೆಯನ್ನು ಗಮನಿಸಿದರೆ, ಇದೊಂದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳದಿಂದ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದು, ಈ ಘಟನೆಯ ಹಿಂದಿನ ನಿಖರ ಕಾರಣಗಳ ಪತ್ತೆಗೆ ಜಾಲ ಬೀಸಿದ್ದಾರೆ.