ಉಡುಪಿ ಮಾರ್ಚ್ 24: ಉಡುಪಿಯ ಬಡಾ ನಿಡಿಯೂರು ಭಾಗದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ಮಾಜಿ ಶಾಸಕ ರಘುಪತಿ ಭಟ್ ನಡೆಸಿದ ಏಕಾಂಗಿ ಧರಣಿ ಕೊನೆಗೂ ಯಶಸ್ವಿಯಾಗಿದೆ.

ಮಾಜಿ ಶಾಸಕ ರಘುಪತಿ ಭಟ್ ಅವರ ಧರಣಿಗೆ ಜಯ ಸಂದಿದ್ದು ಇದೀಹ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಬಡನಿಡಿಯೂರು ಗ್ರಾಮದ ನಿವೇಶನಕ್ಕೆ ತಾತ್ಕಾಲಿಕ ವಿನ್ಯಾಸ ಅನುಮೋದನೆ ನೀಡಲಾಗಿದೆ. “ಕಾನೂನಾತ್ಮಕವಾಗಿ ಎಲ್ಲವೂ ಸರಿಯಿದ್ದ ಕಾರಣ ಅನುಮೋದನೆ ದೊರಕಿದೆ. ಧರಣಿ ಕುಳಿತ ಕಾರಣಕ್ಕಾದರೂ ನ್ಯಾಯ ಸಿಗುವಂತಾಗಿದೆ” ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.
ಕಳೆದ ಹಲವಾರು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಯು ಮಲ್ಪೆ ಭಾಗದ ಪ್ರವಾಸೋದ್ಯಮ ಬೆಳವಣಿಗೆಗೆ ಅತ್ಯಗತ್ಯ ಎಂದು ರಘುಪತಿ ಭಟ್ ವಾದಿಸಿದ್ದರು. ಪ್ರಾಧಿಕಾರವು ಸಕಾರಾತ್ಮಕವಾಗಿ ಸ್ಪಂದಿಸಿ ಕಡತ ವಿಲೇವಾರಿ ಮಾಡಿದ ಬೆನ್ನಲ್ಲೇ ಭಟ್ ಅವರು ತಮ್ಮ ಧರಣಿಯನ್ನು ಹಿಂಪಡೆದಿದ್ದಾರೆ. ಈ ಹೋರಾಟವು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಬದಲಾಗಿ ಉಡುಪಿಯ ಪ್ರವಾಸೋದ್ಯಮ ವಲಯಕ್ಕೆ ಸಿಕ್ಕ ಜಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಕಾನೂನಾತ್ಮಕವಾಗಿ ದಾಖಲೆಗಳು ಸರಿಯಿಲ್ಲದಿದ್ದರೆ ನಾನು ಧರಣಿ ಕುಣಿತುಕೊಳ್ಳುತ್ತಿರಲಿಲ್ಲ. ಪ್ರಾಧಿಕಾರದ ಕಾನೂನು ಸಲಹೆಗಾರರ ಕಾನೂನು ಅಭಿಪ್ರಾಯ ಪಡೆದೇ ಇದನ್ನು ಮಾಡಲಾಗಿದೆ. ಕಾನೂನಾತ್ಮಕವಾಗಿ ಸರಿಯಿಲ್ಲ ಎಂದು ಹೇಳುತ್ತಿದ್ದವರಿಗೆ ನಾನು ಇನ್ನು ಉತ್ತರ ಕೊಡಲ್ಲ” ಎಂದು ಹೇಳಿದರು.