ಉಡುಪಿ ಫೆಬ್ರವರಿ 07: ಬೈಂದೂರಿನ ಮಾಜಿ ಶಾಸಕ ಉಡುಪಿ ಜಿಲ್ಲೆಯ ಜಿಲ್ಲೆಯ ಹಿರಿಯ ರಾಜಕಾರಣಿ ಬಸ್ರೂರು ಅಪ್ಪಣ್ಣ ಹೆಗ್ಡೆ (90) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


1935ರ ಡಿ.24ರದು ಬಸ್ರೂರಿನಲ್ಲಿ ಜನಿಸಿದ ಅಪ್ಪಣ್ಣ ಹೆಗ್ಡೆ ಅವರು 1960ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ ಸಾರ್ವಜನಿಕ ಬದುಕಿಗೆ ಕಾಲಿರಿಸಿದ್ದ. 1988-94ರ ಅವಧಿಯಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಅಪ್ಪಣ್ಣ ಹೆಗ್ಡೆ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ್ದರಲ್ಲದೇ ಸುದೀರ್ಘ ಕಾಲ ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅಪ್ಪಣ್ಣ ಹೆಗ್ಡೆ ಅವರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ವ್ಯಕ್ತಪಡಿಸಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ಅತ್ಯಂತ ಮುತುವರ್ಜಿ ವಹಿಸಿ ಸೇವೆ ಸಲ್ಲಿಸಿದ ಧಾರ್ಮಿಕ ಮುಂದಾಳು, ಶಿಕ್ಷಣ ತಜ್ಞ ಹಾಗೂ ಕಂಬಳ ಸಂಪ್ರದಾಯದ ಮಹತ್ವದ ಸಂಘಟಕರಾಗಿದ್ದ ಶ್ರೀ ಅಪ್ಪಣ್ಣ ಹೆಗ್ಡೆ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ಅವರ ನಡೆ ನುಡಿಗಳು, ಜೀವನ ಶೈಲಿ, ಮಾರ್ಗದರ್ಶನ ಮುಂದಿನ ಪೀಳಿಗೆಗೆ ಮಾದರಿಯಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ, ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

Share Information