Connect with us

LATEST NEWS

“ಮಸಿ” ಗಾಗಿ ಇಟ್ಟ 1 ಲಕ್ಷ ಹಣವನ್ನು ಬಡ, ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಹಂಚಿದ ಪ್ರತಿಭಾ ಕುಳಾಯಿ

ಪುತ್ತೂರು ಫೆಬ್ರವರಿ 15: ಬಿಲ್ಲವರು ಹಾಗೂ ಕೋಟಿಚೆನ್ನಯ್ಯರನ್ನು ಅವಹೇಳನ ಮಾಡಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯವರಿಗೆ ಮಸಿ ಬಳಿದರೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್‌ ನಾಯಕಿ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಅವರು ಆ 1 ಲಕ್ಷ ರೂ.ವನ್ನು ಬಡ, ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಹಂಚಿದ್ದಾರೆ.


ಶನಿವಾರ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಿಲ್‌ಗೆ ಆಗಮಿಸಿದ ಅವರು, ಸತ್ಯಧರ್ಮ ಚಾವಡಿಯಲ್ಲಿ ಪ್ರಾರ್ಥನೆ ಮಾಡಿ, ಸ್ಥಳದಲ್ಲೇ 10 ವಿದ್ಯಾರ್ಥಿನಿಯರಿಗೆ ತಲಾ 10 ಸಾವಿರ ರೂ.ಧನಂತೆ ವಿತರಿಸಿದರು. ಪುತ್ತೂರು ಆಸುಪಾಸಿನ ಇನ್ನೂ 20 ಬಡ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೆಜ್ಜೆಗಿರಿ ಮೂಲಕ ಆರಿಸಿಕೊಟ್ಟಲ್ಲಿ ಜಾತಿ ಮತ ಭೇದವಿಲ್ಲದೆ ಅವರ ಶಿಕ್ಷಣ ವೆಚ್ಚ ಭರಿಸುವುದಾಗಿಯೂ ಪ್ರಕಟಿಸಿದರು.

ಗೆಜ್ಜೆಗಿರಿ ಕ್ಷೇತ್ರದಲ್ಲಿ ಯಜಮಾನರಾದ ಶ್ರೀಧರ ಪೂಜಾರಿ ಅವರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡಿದ ಪ್ರತಿಭಾ ಕುಳಾಯಿ, ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ಕಾರಣಿಕದಿಂದಾಗಿ ತಪ್ಪು ಮಾಡಿದ ವ್ಯಕ್ತಿ ಪ್ರಾಯಶ್ಚಿತ್ತ ಪಟ್ಟಿದ್ದಾರೆ. ಗರಡಿ ಕ್ಷೇತ್ರಗಳಲ್ಲೇ ತಪ್ಪು ಕಾಣಿಕೆ ಹಾಕಿದ್ದಾರೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ತಾನಾಡಿದ ಮಾತುಗಳನ್ನು ಕೂಡ ಈ ಪುಣ್ಯದ ಮಣ್ಣಿನಲ್ಲಿ ಬಿಟ್ಟು ಬಿಡುತ್ತಿದ್ದೇನೆ. ಅದಕ್ಕಾಗಿ ಮೀಸಲಿಟ್ಟ ಹಣವನ್ನು ಎಲ್ಲಜಾತಿ, ಸಮುದಾಯದ 10 ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸಮಾನವಾಗಿ ಹಂಚುತ್ತಿದ್ದೇನೆ ಎಂದರು.