ಕಾಸರಗೋಡು ಮಾರ್ಚ್ 30 : ತಮ್ಮ ಸಮುದಾಯದ ಹೊರಗಿನವರನ್ನು ವಿವಾಹವಾದರೆ ಸದಸ್ಯತ್ವ ಕಳೆದುಕೊಳ್ಳಬೇಕು ಎಂಬ ಕ್ನಾನಾಯ ಕ್ಯಾಥೊಲಿಕ್ ಚರ್ಚ್ನ ಶತಮಾನಗಳ ಹಳೆಯ ‘ರಕ್ತಶುದ್ಧಿ’ ಸಂಪ್ರದಾಯಕ್ಕೆ ಕೇರಳ ಹೈಕೋರ್ಟ್ ಬ್ರೇಕ್ ಹಾಕಿದೆ. ಈ ತೀರ್ಪಿನ ಬೆನ್ನಲ್ಲೇ, ಕಾಸರಗೋಡಿನ ಆಟೋರಿಕ್ಷಾ ಚಾಲಕ ಜಸ್ಟಿನ್ ಜಾನ್ ಅವರು ತಮ್ಮ ವಿವಾಹವನ್ನು ಸ್ವಂತ ಪ್ಯಾರಿಷ್ನಲ್ಲೇ ನಡೆಸಿಕೊಡುವಂತೆ ಚರ್ಚ್ಗೆ ಪತ್ರ ಬರೆಯುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ.

ಕೊಟ್ಟಾಯಂನ ಕ್ನಾನಾಯ ಕ್ಯಾಥೊಲಿಕ್ ಆರ್ಚ್ಪಾರ್ಕಿ ತನ್ನ ಸದಸ್ಯರು ಸಮುದಾಯದ ಹೊರಗಿನವರನ್ನು (ಬೇರೆ ಪಂಗಡದ ಕ್ರಿಶ್ಚಿಯನ್ನರನ್ನಾದರೂ) ಮದುವೆಯಾದರೆ ಅವರ ಚರ್ಚ್ ಸದಸ್ಯತ್ವವನ್ನು ರದ್ದುಗೊಳಿಸುತ್ತದೆ. ತನ್ನ ಯಹೂದಿ ಮೂಲದ ವಂಶಾವಳಿಯ “ಶುದ್ಧತೆ” ಕಾಪಾಡಲು ಈ ನಿಯಮ ಪಾಲಿಸುತ್ತಿರುವುದಾಗಿ ಚರ್ಚ್ ವಾದಿಸುತ್ತಿದೆ. ಆದರೆ, ಇದು ಸಂವಿಧಾನಬಾಹಿರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸುಧಾರಣಾವಾದಿ ಗುಂಪುಗಳು 2015 ರಿಂದ ಕಾನೂನು ಹೋರಾಟ ನಡೆಸುತ್ತಿವೆ.
ಮಾರ್ಚ್ 23 ರಂದು ತೀರ್ಪು ನೀಡಿದ ಹೈಕೋರ್ಟ್, “ಚರ್ಚ್ ತನ್ನ ಸದಸ್ಯರ ವೈಯಕ್ತಿಕ ಜೀವನವನ್ನು ನಿಯಂತ್ರಿಸಲು ಅಥವಾ ಸಮುದಾಯದ ಹೊರಗೆ ಮದುವೆಯಾಗುವವರಿಗೆ ಸಂಸ್ಕಾರಗಳನ್ನು ನಿರಾಕರಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ. 1969ರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕ್ರಿಶ್ಚಿಯನ್ನರಲ್ಲಿ ಜಾತಿ ವ್ಯವಸ್ಥೆ ಇಲ್ಲದಿರುವುದನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.
ಕಾಸರಗೋಡಿನ ಕೊಟ್ಟೋಡಿಯ ಸೇಂಟ್ ಆನ್ಸ್ ಚರ್ಚ್ನ ಸದಸ್ಯರಾಗಿರುವ ಜಸ್ಟಿನ್ ಜಾನ್, ರೋಮನ್ ಕ್ಯಾಥೋಲಿಕ್ ಮಹಿಳೆಯನ್ನು ಮದುವೆಯಾಗಲು ಕಳೆದ ಮೂರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಆರ್ಚ್ಬಿಷಪ್ ಮಾರ್ ಮ್ಯಾಥ್ಯೂ ಮೂಲಕ್ಕಟ್ ಅವರಿಗೆ ಪತ್ರ ಬರೆದಿರುವ ಅವರು, “ಮೇ 18 ರಂದು ನನ್ನ ಪ್ಯಾರಿಷ್ನಲ್ಲೇ ವಿವಾಹ ನಡೆಸಿಕೊಡಬೇಕು” ಎಂದು ಮನವಿ ಮಾಡಿದ್ದಾರೆ.
ಹೈಕೋರ್ಟ್ ತೀರ್ಪಿನಿಂದ ಚರ್ಚ್ಗೆ ಹಿನ್ನಡೆಯಾಗಿದ್ದರೂ, ತನ್ನ ಸಂಪ್ರದಾಯವನ್ನು ಬಿಟ್ಟುಕೊಡಲು ಅದು ಸಿದ್ಧವಿಲ್ಲ. ಮಾರ್ಚ್ 29 ರಂದು ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಆರ್ಚ್ಬಿಷಪ್ ಅವರ ಪತ್ರವನ್ನು ಓದಲಾಗಿದ್ದು, ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಘೋಷಿಸಲಾಗಿದೆ. ಈ ಹೋರಾಟಕ್ಕೆ 1988 ರಲ್ಲೇ ಅಡಿಪಾಯ ಬಿದ್ದಿತ್ತು. ಬಿಜು ಉತುಪ್ ಎಂಬುವವರ ಕುಟುಂಬದ ಸದಸ್ಯತ್ವವನ್ನು ಅವರ ಅಜ್ಜಿ ಬೇರೆ ಪಂಗಡದವರು ಎಂಬ ಕಾರಣಕ್ಕೆ ಪ್ರಶ್ನಿಸಲಾಗಿತ್ತು. ಅಂದಿನಿಂದ ಆರಂಭವಾದ ಈ NOC ಪಡೆಯುವ ಹೋರಾಟ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಸಂಪ್ರದಾಯ ಮತ್ತು ಸಾಂವಿಧಾನಿಕ ಹಕ್ಕುಗಳ ನಡುವಿನ ಈ ಸಮರ ಈಗ ದೇಶದ ಅತ್ಯುನ್ನತ ನ್ಯಾಯಾಲಯದ ಅಂಗಳಕ್ಕೆ ತಲುಪುವ ಲಕ್ಷಣಗಳು ದಟ್ಟವಾಗಿವೆ.