ವಾಷಿಂಗ್ಟನ್/ಟೆಹ್ರಾನ್ ಎಪ್ರಿಲ್ 27: ಪಾಕಿಸ್ತಾನದಲ್ಲಿ ನಡೆದ ಎರಡನೇ ಸುತ್ತಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಇರಾನ್ ಈಗ ಸಂಧಾನಕ್ಕೆ ಮೂರು ಹಂತದ ಕಠಿಣ ಷರತ್ತುಗಳನ್ನು ವಿಧಿಸಿದೆ. ಈ ಪ್ರಸ್ತಾವನೆಯನ್ನು ಇರಾನ್ ಮಧ್ಯವರ್ತಿಗಳ ಮೂಲಕ ಅಮೆರಿಕಕ್ಕೆ ರವಾನಿಸಿದ್ದು, ಯುದ್ಧದ ಅಂತ್ಯ ಮತ್ತು ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಕಟ್ಟುನಿಟ್ಟಿನ ನಿಲುವು ತಳೆದಿದೆ.

ಇರಾನ್ ಮುಂದಿಟ್ಟಿರುವ 3 ಹಂತದ ಸೂತ್ರಗಳು:
ಹಂತ 1: ಇರಾನ್ ಮತ್ತು ಲೆಬನಾನ್ ವಿರುದ್ಧದ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಭವಿಷ್ಯದಲ್ಲಿ ದಾಳಿ ನಡೆಸದಂತೆ ಭರವಸೆ ನೀಡಬೇಕು.
ಹಂತ 2: ಮೊದಲ ಹಂತದ ಬೇಡಿಕೆ ಈಡೇರಿದರೆ ಮಾತ್ರ ಹಾರ್ಮುಜ್ ಜಲಸಂಧಿಯ ಆಡಳಿತ ಮತ್ತು ನಿರ್ವಹಣೆ ಕುರಿತು ಚರ್ಚೆ.
ಹಂತ 3: ಈ ಎರಡೂ ಹಂತಗಳು ಯಶಸ್ವಿಯಾದ ನಂತರವಷ್ಟೇ ಬಹುಚರ್ಚಿತ ‘ಪರಮಾಣು ವಿಚಾರ’ದ ಬಗ್ಗೆ ಮಾತುಕತೆ ನಡೆಸುವುದಾಗಿ ಇರಾನ್ ಸ್ಪಷ್ಟಪಡಿಸಿದೆ.
ಇರಾನ್ನ ಈ ಷರತ್ತುಗಳಿಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ವಕ್ತಾರೆ ಒಲಿವಿಯಾ ವೇಲ್ಸ್, “ಅಮೆರಿಕ ಪತ್ರಿಕಾ ಪ್ರಕಟಣೆಗಳ ಮೂಲಕ ಮಾತುಕತೆ ನಡೆಸುವುದಿಲ್ಲ. ನಮ್ಮ ಹಕ್ಕುಗಳನ್ನು ಕಾಯ್ದುಕೊಳ್ಳುವುದು ಮತ್ತು ಅಮೆರಿಕನ್ನರ ಸುರಕ್ಷತೆ ನಮಗೆ ಮುಖ್ಯ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದಕ್ಕೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ” ಎಂದು ಗುಡುಗಿದ್ದಾರೆ.
ಸಂಧಾನ ಸಭೆಗಳು ಪದೇ ಪದೇ ವಿಫಲವಾಗುತ್ತಿರುವುದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇನ್ನು ಮುಂದೆ ನಮ್ಮ ರಾಯಭಾರಿಗಳಿಗೆ 18 ಗಂಟೆಗಳ ಸುದೀರ್ಘ ವಿಮಾನ ಪ್ರಯಾಣದ ಅಗತ್ಯವಿಲ್ಲ, ಬೇಕಿದ್ದರೆ ಫೋನ್ ಕರೆ ಮೂಲಕ ಚರ್ಚಿಸಲಿ” ಎಂದು ಹೇಳುವ ಮೂಲಕ ನೇರ ಮಾತುಕತೆಯಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ.
ಇಸ್ಲಾಮಾಬಾದ್ ಮತ್ತು ಒಮಾನ್ ಭೇಟಿಯ ನಂತರ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈಗ ರಷ್ಯಾಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ, ಮಧ್ಯಪ್ರಾಚ್ಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಲಿದ್ದಾರೆ. ಇತ್ತ ವಾಷಿಂಗ್ಟನ್ನಲ್ಲಿ ಟ್ರಂಪ್ ಅವರು ಸೋಮವಾರ ತಮ್ಮ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ತುರ್ತು ‘ಪರಿಸ್ಥಿತಿ ಕೊಠಡಿ’ (Situation Room) ಸಭೆ ನಡೆಸಲಿದ್ದಾರೆ.