ಬೆಳ್ತಂಗಡಿಯಲ್ಲಿ ಆನೆ ದಂತ ಚೋರರ ಸೆರೆ 51 ಕೆಜಿ ತೂಕದ 10 ದಂತ ವಶ

ಬೆಳ್ತಂಗಡಿ, ಸೆಪ್ಟೆಂಬರ್ 18: ಬೆಳ್ತಂಗಡಿ ತಾಲೂಕಿನ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಆನೆದಂತ ಪುತ್ತೂರು ಸಂಚಾರಿ ಅರಣ್ಯ ದಳ( ಎಫ್.ಎಂ.ಎಸ್.) ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅಬ್ರಾಹಂ, ಸುರೇಶ್ ಬಾಬು, ರಮೇಶ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಅನ್ವರ್ ತಲೆಮರೆಸಿಕೊಂಡಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಸುರ್ಯ ಸಮೀಪದ ಮನೆಯೊಂದಕ್ಕೆ ದಾಳಿ ನಡೆಸಿದ ಪುತ್ತೂರು ಸಂಚಾರಿ ಅರಣ್ಯ ದಳದ ಅಧಿಕಾರಿಗಳು ಅಕ್ರಮವಾಗಿ ದಾಸ್ತಾನಿರಸಲಾಗಿದ್ದ 51 ಕೆಜಿ ಯ 10 ಆನೆ ದಂತ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕಳೆದು ಮೂರು ತಿಂಗಳಿಂದ ಆನೆ ದಂತ ದಾಸ್ತಾನು ಇರಿಸಿದ್ದು ಮಾತ್ರವಲ್ಲದೆ ಮಾರಾಟ ಜಾಲವನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳು ಕಳೆದ ಹಲವಾರು ವರ್ಷಗಳಿಂದ ಇದೇ ಕೃತ್ಯದಲ್ಲಿ ತೊಡಗಿದ್ದರು ಎನ್ನಲಾಗಿದ್ದು, ಕೇರಳದಿಂದ ಆನೆ ದಂತ ತಂದಿರುವ ಕುರಿತಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಪುದುವೆಟ್ಟು ಅರಣ್ಯದಲ್ಲಿ ಆನೆಯೊಂದನ್ನು ಹೊಡೆದುರುಳಿಸಿ ದಂತ ಎಗರಿಸಿರುವ ಕುರಿತು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ವಶಪಡಿಸಿಕೊಂಡಿರುವ ಆನೆಯ ದಂತದಲ್ಲಿ 8 ವರ್ಷ ಹಳೆಯ ದಂತವೂ ಸೇರಿದೆ.

ಪ್ರಕರಣದ ಹಿಂದೆ ದೊಡ್ಡ ಜಾಲವೊಂದು ಇರುವ ಕುರಿತು ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಬೆಳ್ತಂಗಡಿ ಅರಣ್ಯ ಇಲಾಖೆಗೆ ಪ್ರಕರಣದ ಮುಂದಿನ ತನಿಖೆಗೆ ಹಸ್ತಾಂತರಿಸಲಾಗಿದೆ.