ಬೆಳ್ತಂಗಡಿ, ಮಾರ್ಚ್ 26: ತಾಲೂಕಿನ ಕೊಕ್ಕಡ ಸಮೀಪದ ವಿಜಯ ವಿಹಾರ – ಮರುವಂತಿಲ ಪ್ರದೇಶದಲ್ಲಿ ಕಾಡಾನೆ ಗ್ರಾಮಕ್ಕೆ ನುಗ್ಗಿದ ಘಟನೆ ಮುಂಜಾನೆ ಬೆಳಕಿಗೆ ಬಂದಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ.

ಮುಂಜಾನೆ ಸಮಯದಲ್ಲಿ ಅಚಾನಕ್ ಪ್ರತ್ಯಕ್ಷವಾದ ಕಾಡಾನೆ, ಮನೆಗಳ ಸುತ್ತಮುತ್ತ ಅಲೆದಾಡಿದ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಗ್ರಾಮಕ್ಕೆ ನುಗ್ಗಿದ ಆನೆ ಮರುವಂತಿಲದಲ್ಲಿರುವ ಮನೆ ಗೇಟ್ ಅನ್ನು ಧ್ವಂಸಗೈದಿದ್ದು, ಆಸ್ತಿ ಹಾನಿಗೂ ಕಾರಣವಾಗಿದೆ. ಘಟನೆಯ ನಂತರ ಆನೆ ದೇವರು ವಸರಿಕಟ್ಟೆ ಭಾಗದ ಗೇರುತೋಟದ ಕಡೆಗೆ ಸಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ. ಕಾಡಾನೆ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆ, ಗ್ರಾಮಸ್ಥರಲ್ಲಿ ಆತಂಕ ಮುಂದುವರಿದಿದೆ.