Connect with us

DAKSHINA KANNADA

ಮೊಬೈಲ್ ಟವರ್ ನಿರ್ವಹಣೆ ವೇಳೆ ವಿದ್ಯುತ್ ಸ್ಪರ್ಶ: ನಿರ್ವಾಹಕ ಸಾವು

ಕಡಬ, ಮೇ 03: ಮೊಬೈಲ್ ಟವರ್‌ ನಿರ್ವಹಣೆಗೆ ಬಂದಿದ್ದ ವ್ಯಕ್ತಿಯೋರ್ವರು ವಿದ್ಯುತ್ ಶಾಕ್​ನಿಂದ ಸಾವನ್ನಪ್ಪಿದ ಘಟನೆ ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿರುವ ಭಾನುವಾರ ರಾತ್ರಿ ನಡೆದಿದೆ.

ಉಪ್ಪಿನಂಗಡಿ ನಟ್ಟಿಬೈಲು ದಿ.ವಾಸುದೇವ ನಾಯಕ್‌ ರವರ ಪುತ್ರ ರಾದೇಶ್ಯಾಮ್ ನಾಯಕ್ (40) ಮೃತ ವ್ಯಕ್ತಿ. ಇವರು ಉಪ್ಪಿನಂಗಡಿಯಿಂದ ಆಲಂಕಾರು ವ್ಯಾಪ್ತಿಯಲ್ಲಿ ಬರುವ ಏರ್‌ಟೆಲ್ ಕಂಪನಿಯ ಟವರ್‌ಗಳ ನಿರ್ವಹಣೆಯನ್ನು ಮಾಡುತ್ತಿದ್ದರು.

ಭಾನುವಾರ ರಾತ್ರಿ ನೆಕ್ಕರೆ ಟವರ್‌ನ ಪರಿಶೀಲನೆಗೆ ಬಂದಿದ್ದರು. ಈ ವೇಳೆ ಟವರ್‌ಗೆ ವಿದ್ಯುತ್ ಸರಬರಾಜಾಗುತ್ತಿದ್ದ ವಿದ್ಯುತ್ ಪರಿವರ್ತಕದ ಕಂಬದ ಬಳಿ ಯಾವುದೋ ಕೆಲಸ ನಿರ್ವಹಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟವರ್‌ನ ಪರಿಶೀಲನೆಗೆ ಬಂದ ವೇಳೆ ಹಿರಿಯ ಮಗಳನ್ನು ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಮಗಳನ್ನು ಕಾರಿನಲ್ಲಿಯೇ ಕುಳ್ಳಿರಿಸಿ ಟವರ್‌ನ ಪರಿಶೀಲನೆಗೆ ಹೋಗಿದ್ದರು.

ಹಲವು ತಾಸು ಕಳೆದರೂ ಕಾರು ರಸ್ತೆಯಲ್ಲೇ ಬಾಕಿಯಾಗಿತ್ತು. ಇದೇ ವೇಳೆ ಟವರ್‌ಗೆ ವಿದ್ಯುತ್ ಸಂಪರ್ಕವಾಗಿದ್ದ ಪರಿವರ್ತಕದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಇದ್ದನ್ನು ಗಮನಿಸಿದ ಸ್ಥಳೀಯರು ಟವರ್ ಬಳಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.