ಮಂಗಳೂರು ಅಕ್ಟೋಬರ್ 31: ಮಂಗಳೂರಿನಲ್ಲಿ ಸಂಚರಿಸುತ್ತಿರುಲ ಇಲೆಕ್ಟ್ರಿಕ್ ಆಟೋಗಳಿಗೆ ಆರ್ ಟಿಓ ಪರವಾನಿಗೆ ಪಡೆಯಲು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶಿಸಿದ್ದಾರೆ.

2002ರ ಜನವರಿ 20ರಿಂದ 2025ರ ಅಕ್ಟೋಬರ್ 30ರ ವರೆಗೆ ಬ್ಯಾಟರಿ ಚಾಲಿತ ಇಂಧನ ಬಳಸಿ ಪರವಾನಿಗೆ ಪಡೆಯದೇ ನೋಂದಣಿಯಾಗಿರುವ ಹಾಗೂ ವಲಯ 1 (ಮಂಗಳೂರು ನಗರ, ಉಳ್ಳಾಲ)ರ ವ್ಯಾಪ್ತಿ ಸಂಚರಿಸುತ್ತಿರುವ ಆಟೋ ರಿಕ್ಷಾಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆದುಕೊಳ್ಳಬೇಕು , ವಲಯ 1 ವ್ಯಾಪ್ತಿಗೆ ಬರುವ ಪರವಾನಿಗೆ ಹೊಂದಿರುವ ಆಟೋ ರಿಕ್ಷಾಗಳನ್ನು ಗುರುತಿಸಿ ಆಕಾಶ ನೀಲಿ ಬಣ್ಣದ ಚೌಕಾಕಾರದಲ್ಲಿ ಬಣ್ಣವನ್ನು ಬಳಿದು ಪೊಲೀಸ್ ಇಲಾಖೆಯಿಂದ ಗುರುತಿನ ಸಂಖ್ಯೆ ಪಡೆಯಬೇಕು ಎಂದಿದ್ದಾರೆ.
ವಲಯ 2 (ಗ್ರಾಮಾಂತರ) ರಲ್ಲಿ 2025ರ ಅಕ್ಟೋಬರ್ 30ರ ಅನಂತರ ನೋಂದಣಿ ಯಾಗುವ ವಿದ್ಯುತ್ ಚಾಲಿತ ಆಟೋ ರಿಕ್ಷಾಗಳು ಗ್ರಾಮಾಂತರ ಪರವಾನಿಗೆಯಾಗಿದ್ದು, ಎಲ್ಲ ಗ್ರಾಮಾಂತರ ಪರವಾನಿಗೆಯನ್ನು ವಲಯ-2 ಎಂದು ಪರಿಗಣಿಸಲಾಗುವುದು. ವಲಯ 2ರಲ್ಲಿ ಬರುವ ಎಲ್ಲ ಗ್ರಾಮಾಂತರ ಪರವಾನಿಗೆಗಳು ವಲಯ 1ರ ವ್ಯಾಪ್ತಿಗೆ ಪ್ರವೇಶಿಸಬಾರದು. ವಲಯ 2ರಲ್ಲೇ ನಿಲುಗಡೆಗೊಳಿಸಬೇಕು. ವಲಯ 2ರ ವ್ಯಾಪ್ತಿಗೆ ಬರುವ ಪರವಾನಿಗೆಗಳನ್ನು ಹೊಂದಿರುವ ಆಟೋರಿಕ್ಷಾಗಳನ್ನು ಗುರುತಿಸಿ ವೃತ್ತಾಕಾರದ ಹಳದಿ ಬಣ್ಣದ ಸ್ಟಿಕ್ಕರ್/ಗುರುತಿನ ಬಣ್ಣವನ್ನು ಬಳಿದು, ಪೊಲೀಸ್ ಇಲಾಖೆಯಿಂದ ಗುರುತಿನ ಸಂಖ್ಯೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.



