ಕೇರಳದಲ್ಲಿ ಚುನಾವಣಾ ವಿಷಯವಾಗಿ ಶಬರಿಮಲೆ ಆಯೋಗದ ಆದೇಶಕ್ಕೆ ಕ್ಯಾರೆ ಅನ್ನದ ರಾಜಕೀಯ ಪಕ್ಷಗಳು

ಕೇರಳ ಮಾರ್ಚ್ 14: ಕೇರಳದಲ್ಲಿ ಮತ್ತೆ ಶಬರಿಮಲೆ ವಿಚಾರ ವಿವಾದ ಸೃಷ್ಠಿಸಿದೆ. ಈ ಬಾರಿ ಅದು ಚುನಾವಣೆಯ ವಿಷಯವಾಗಿ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಶಬರಿಮಲೆ ಸೇರಿದಂತೆ ಯಾವುದೇ ಧಾರ್ಮಿಕ ವಿಚಾರವನ್ನು ಚುನಾವಣೆಗೆ ಬಳಸಿಕೊಳ್ಳಬಾರದು ಎಂದು ಕೇರಳ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಆದರೆ ಚುನಾವಣಾ ಆಯೋಗದ ಆದೇಶಕ್ಕೆ ಕ್ಯಾರೇ ಅನ್ನದ ರಾಜಕೀಯ ಪಕ್ಷಗಳು ತಾವು ಚುನಾವಣೆ ಪ್ರಚಾರದಲ್ಲಿ ಶಬರಿಮಲೆ ವಿಚಾರವನ್ನು ಪ್ರಚಾರಕ್ಕೆ ಬಳಸಿಯೇ ತೀರುತ್ತೆವೆ ಎಂದು ಘೋಷಿಸಿದ್ದರು.

ಈ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಶಬರಿಮಲೆ ವಿಚಾರವನ್ನು ಬಳಸಿಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಕೇರಳ ಮುಖ್ಯ ಚುನಾವಣಾ ಅಧಿಕಾರಿ ಟೀಕಾ ರಾಮ್ ಮೀನಾ ಅವರು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬುಧವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ. ಧಾರ್ಮಿಕ ವಿಚಾರಗಳನ್ನು ಚುನಾವಣೆಗೆ ಬಳಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಈ ನಿಯಮವನ್ನು ಮೀರಿದ್ದರ ಬಗ್ಗೆ ಯಾರು ಬೇಕಾದರೂ ದೂರು ನೀಡಬಹುದು. ದೂರನ್ನು ಪರಿಶೀಲಿಸಿ, ಉಲ್ಲಂಘನೆ ನಡೆದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮೀನಾ ತಿಳಿಸಿದ್ದಾರೆ.

ಆದರೆ ಕೇರಳದಲ್ಲಿ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಭಿನ್ನ ನಿಲುವು ತಳೆದಿವೆ. ಈ ಆದೇಶವನ್ನು ಬಿಜೆಪಿ ಮತ್ತು ಕಾಂಗ್ರೆಸ್ ವಿರೋಧಿಸಿವೆ. ಆದರೆ ಆಡಳಿತಾರೂಢ ಸಿಪಿಎಂ ಚುನಾವಣಾ ಅಧಿಕಾರಿಯ ಆದೇಶವನ್ನು ಸ್ವಾಗತಿಸಿದೆ. ಈ ವಿಚಾರವನ್ನು ಚುನಾವಣೆಗೆ ಬಳಸಿಕೊಂಡೇ ತೀರುತ್ತೇವೆ ಎಂದು ರಾಜ್ಯ ಬಿಜೆಪಿ ಘಟಕವು ಬುಧವಾರ ಮತ್ತೆ ಹೇಳಿದೆ.

ಇತ್ತೀಚೆಗಷ್ಟೇ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಕೇರಳ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಬಿಜೆಪಿ ನಾಯಕ ಕುಮ್ಮನಂ ರಾಜಶೇಖರ್ ಇದೊಂದು ತರ್ಕವಿಲ್ಲದ ಆದೇಶ. ಇದು ಧಾರ್ಮಿಕ ಸ್ವಾತಂತ್ರ್ಯದ, ನಂಬಿಕೆ, ಆಚಾರ–ವಿಚಾರಗಳ ವಿಷಯ. ಇದು ಕೇವಲ ಶಬರಿಮಲೆಗೆ ಸೀಮಿತವಲ್ಲ. ಬದಲಿಗೆ ಮುಂದೊಂದು ದಿನ ಭೀಮಪಳ್ಳಿ ಮಸೀದಿ, ಮಲಯತ್ತೂರು ಚರ್ಚ್‌ಗಳ ವಿಚಾರದಲ್ಲೂ ಹೀಗೇ ಆಗಬಹುದು. ತಮ್ಮ ನಂಬಿಕೆಗಳು ಮತ್ತು ಆಚಾರಗಳನ್ನು ರಕ್ಷಿಸಲು ರಾಜ್ಯದ ಜನರು ಬಯಸಿದ್ದಾರೆ. ನಾವು ಅವರ ಭಾವನೆಗಳನ್ನು ಎತ್ತಿ ಹಿಡಿಯುತ್ತಿದ್ದೇವೆ ಅಷ್ಟೆ ಎಂದು ಚುನಾವಣಾ ಆಯೋಗದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Facebook Comments

comments