ಸೇಲಂ ಮಾರ್ಚ್ 20: ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ ಉತ್ತಮಸೋಲಪುರಂ ಬಳಿ ಶುಕ್ರವಾರ ಬೆಳಿಗ್ಗೆ ಸರ್ಕಾರಿ ಬಸ್, ಪಿಕಪ್ ವ್ಯಾನ್ ಮತ್ತು ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ 11 ತಿಂಗಳ ಮಗು ಮತ್ತು ಮೂರು ತಿಂಗಳ ಗರ್ಭಿಣಿ ಸೇರಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ.

ಈರೋಡ್ನಿಂದ ಸೇಲಂಗೆ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸರ್ಕಾರಿ ಬಸ್ ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿದೆ. ಹೆದ್ದಾರಿಯ ಡಿವೈಡರ್ ದಾಟಿ ಎದುರು ರಸ್ತೆಗೆ ನುಗ್ಗಿದ ಬಸ್, ದೇವಸ್ಥಾನದ ಉತ್ಸವಕ್ಕೆ ತೆರಳುತ್ತಿದ್ದ ಪಿಕಪ್ ವ್ಯಾನ್ ಮತ್ತು ಆಸ್ಪತ್ರೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಪಿಕಪ್ ವ್ಯಾನ್ನಲ್ಲಿದ್ದ ನೈಕಾರಪಟ್ಟಿಯ ಸೆಲ್ವರಾಜ್ (60), ಅವರ ಮೊಮ್ಮಕ್ಕಳಾದ ಜೀವಿಕಾ (11 ತಿಂಗಳು), ನಿತೀಶ್ಕಾ (5 ವರ್ಷ), ಸೊಸೆ ಸತ್ಯ (25) ಸೇರಿದಂತೆ ಒಂದೇ ಕುಟುಂಬದ ಹಲವರು ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ತಾಯಿ-ಮಗ ಕೂಡ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತದ ನಂತರ ಪರಾರಿಯಾಗಿದ್ದ ಬಸ್ ಚಾಲಕ ಅಯ್ಯಂದುರೈನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾಧಿಕಾರಿ ಆರ್. ಬೃಂದಾ ದೇವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.