ಯಲ್ಲಾಪುರ ,ಮಾರ್ಚ್ 25: ಮುಗ್ಧ ನಗು ಮತ್ತು ಹಳ್ಳಿ ಸೊಗಡಿನ ಮಾತಿನ ಮೂಲಕ ಕನ್ನಡಿಗರ ಮನೆಮಾತಾಗಿದ್ದ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಖ್ಯಾತ ಸ್ಪರ್ಧಿ ಬಾವತೀಶ್ (28), ರಸ್ತೆ ಅಪಘಾತವೊಂದರಲ್ಲಿ ಅಕಾಲಿಕ ಮರಣಕ್ಕೀಡಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿಕೆರೆ ಸಮೀಪ ಸಂಭವಿಸಿದ ಭೀಕರ ದುರಂತದಲ್ಲಿ ಈ ಯುವ ಪ್ರತಿಭೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ಗ್ರಾಮದ ನಿವಾಸಿಯಾದ ಬಾವತೀಶ್, ಮಂಗಳವಾರ ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕೆಎಸ್ಆರ್ಟಿಸಿ ಬಸ್ಗೆ ಹಿಂಬದಿಯಿಂದ ಅವರ ವಾಹನ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ದ್ವಿಚಕ್ರ ವಾಹನಕ್ಕೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾವತೀಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಮೂಲಕ ಹಳ್ಳಿಯ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ಬಾವತೀಶ್, ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಅಭಿಮಾನಿಗಳ ನೆಚ್ಚಿನ ಸ್ಪರ್ಧಿಯಾಗಿದ್ದರು. ಜೀವನದಲ್ಲಿ ದೊಡ್ಡ ಗುರಿ ಹೊತ್ತು ಸಾಗುತ್ತಿದ್ದ ಯುವಕನ ಬದುಕು ಹೀಗೆ ರಸ್ತೆಯಲ್ಲೇ ಅಂತ್ಯವಾಗಿರುವುದು ತೀವ್ರ ವಿಷಾದನೀಯ. ಅವರ ಅನಿರೀಕ್ಷಿತ ಸಾವು ಕುಟುಂಬಸ್ಥರು ಹಾಗೂ ಸಾವಿರಾರು ಅಭಿಮಾನಿಗಳನ್ನು ಕಣ್ಣೀರಲ್ಲಿ ಮುಳುಗಿಸಿದೆ. ಪ್ರಸ್ತುತ ಈ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.