ಮಂಗಳೂರು, ಮಾರ್ಚ್ 31: ತಣ್ಣೀರುಬಾವಿ ಕಡಲು ಹಾಗೂ ನದಿ ದಂಡೆಗಳ ನಡುವೆ ಹಲವು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸವಿರುವ ಬಡವರಿಗೆ ಹಕ್ಕುಪತ್ರ ನೀಡುವ ಬದಲು, ಅವರ ವಸತಿ ಪ್ರದೇಶವನ್ನು ಬಲಾಡ್ಯರಿಗೆ ಪರಭಾರೆ ಮಾಡುವ ಉದ್ದೇಶದಿಂದ ಕೆಐಎಡಿಬಿ ಅಧಿಕಾರಿಗಳು ಬೇಲಿ ಹಾಕಲು ಮುಂದಾಗಿರುವುದು ಸಂವಿಧಾನ ಬಾಹಿರ ಕ್ರಮವಾಗಿದೆ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಆರೋಪಿಸಿದರು.

ಮಂಗಳೂರು ನಗರದ ಬೈಕಂಪಾಡಿಯಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿ ಎದುರು ಡಿವೈಎಫ್ಐ ಮಂಗಳೂರು ನಗರ ಸಮಿತಿ, ತಣ್ಣೀರುಬಾವಿ ಹೋರಾಟ ಸಮಿತಿ ಹಾಗೂ ದಲಿತ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡವರು ಸಮುದ್ರವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ತಡೆಬೇಲಿ ನಿರ್ಮಿಸುವ ಮೂಲಕ ಅವರ ಸಮುದ್ರ ಸಂಪರ್ಕವನ್ನೇ ಕಡಿತಗೊಳಿಸಲಾಗುತ್ತಿದೆ. ತಕ್ಷಣವೇ ತಣ್ಣೀರುಬಾವಿಯಲ್ಲಿ ನಿರ್ಮಿಸಿರುವ ಬೇಲಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಬಡವರ ಮೇಲಿನ ಕಿರುಕುಳ ಮುಂದುವರಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ತಣ್ಣೀರುಬಾವಿ ನಿವಾಸಿಗಳಿಗೆ ಇನ್ನೂ ಹಕ್ಕುಪತ್ರ ಸಿಗದೆ ಇರುವುದನ್ನು ಟೀಕಿಸಿದರು. ಚುನಾವಣೆ ಸಂದರ್ಭದಲ್ಲಷ್ಟೇ ಬಡವರು ನೆನಪಾಗುತ್ತಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಪ್ರತಿಭಟನೆಯಲ್ಲಿ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಹೋರಾಟ ಸಮಿತಿ ಕಾರ್ಯದರ್ಶಿ ಯೋಗೀಶ್ ಅಮೀನ್, ಡಿವೈಎಫ್ಐ ನಗರ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ ಸೇರಿದಂತೆ ಹಲವರು ಮಾತನಾಡಿದರು. ತಣ್ಣೀರುಬಾವಿ ಮಸೀದಿ ಅಧ್ಯಕ್ಷ ಅಬ್ದುಲ್ ರಾಝಿಕ್, ಹೋರಾಟ ಸಮಿತಿಯ ಪ್ರಮುಖರಾದ ಅಜೀಜ್, ರಿಯಾಜ್ ಬಿ.ಎಚ್., ಜೋಹರ್, ಫ್ಲೋರಿನ್, ದೀಪಾ, ಜಯಂತಿ, ರೇಖಾ, ನೌಫಲ್, ರಶೀದ್ ಖಾನ್, ಸಿಮ್ರಾನ್, ಸುಪ್ರಿತಾ, ಕವಿತಾ, ಫೌಝಿಯ ಹಾಗೂ ಯುವಕ ಸಂಘದ ಅಧ್ಯಕ್ಷ ನವೀನ್ ಸುವರ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ದಲಿತ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ಕೃಷ್ಣ ತಣ್ಣೀರುಬಾವಿ ಸ್ವಾಗತಿಸಿ, ಹೋರಾಟ ಸಮಿತಿ ಅಧ್ಯಕ್ಷೆ ಶಮೀಮಾ ಬಾನು ವಂದಿಸಿದರು. ಈ ವೇಳೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿ, ತಡೆಬೇಲಿ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಲಾಯಿತು. ಪ್ರತಿಭಟನೆಯ ಸಂದರ್ಭದಲ್ಲಿ ಹೊಂಡ ಗುಂಡಿಗಳಿಂದ ತುಂಬಿ ಹೋಗಿರುವ ಕೈಗಾರಿಕಾ ಪ್ರದೇಶದ ರಸ್ತೆ ದುರಸ್ತಿ ಮಾಡಿ ಎಂದು ಪ್ರತಿಭಟನೆ ಮಾಡಿದರೆ ಇಲಾಖೆಯಲ್ಲಿ ದುಡ್ಡಿಲ್ಲ ಎಂದು ಉತ್ತರ ನೀಡುವ ಕೆಐಎಡಿಬಿ ಅಧಿಕಾರಿಗಳಿಗೆ ಬಡವರ ಕಾಲನಿಗೆ ಬೇಲಿ ಹಾಕಲು ಹಣ ಮಂಜೂರು ಎಲ್ಲಿಂದ ಆಯಿತು ಎಂದು ಮನವಿ ಸ್ವೀಕರಿಸಲು ಬಂದ ಅಧಿಕಾರಿಯನ್ನು ಬಿ.ಕೆ ಇಮ್ತಿಯಾಜ್ ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡದೆ ನುಣುಚಿ ಕೊಂಡರು.