ಬೆಂಗಳೂರು, ಏಪ್ರಿಲ್ 17: ಮದ್ಯ ಸೇವಿಸಿ ಬಂದಿದ್ದ ವ್ಯಕ್ತಿಗೆ ಟೆಸ್ಟ್ ಡ್ರೈವ್ಗಾಗಿ ಕಾರು ನೀಡಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ನಗರದ ಮಹದೇವಪುರದಲ್ಲಿರುವ ಮಹೇಂದ್ರ ಶೋರೂಂನಲ್ಲಿ ನಡೆದಿದೆ.
ಏಪ್ರಿಲ್ 12 ರಂದು ಅಭಿಲಾಷ್ ಎಂಬ ವ್ಯಕ್ತಿ ಕಾರು ಖರೀದಿಸುವ ಉದ್ದೇಶದಿಂದ ಮಹದೇವಪುರದ ಮಹೀಂದ್ರಾ ಶೋರೂಂಗೆ ಭೇಟಿ ನೀಡಿದ್ದನು. ಆತ ಮದ್ಯ ಸೇವಿಸಿರುವುದು ಮೇಲ್ನೋಟಕ್ಕೆ ತಿಳಿದಿದ್ದರೂ, ಶೋರೂಂ ಸಿಬ್ಬಂದಿ ಅದನ್ನು ನಿರ್ಲಕ್ಷಿಸಿ ಟೆಸ್ಟ್ ಡ್ರೈವ್ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾರು ಚಾಲನೆ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮದ್ಯದ ಅಮಲಿನಲ್ಲಿದ್ದ ಅಭಿಲಾಷ್ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಅತಿ ವೇಗವಾಗಿ ಬಂದ ಕಾರು ರಸ್ತೆಯ ಬದಿಯಲ್ಲಿದ್ದ ಮತ್ತು ಚಲಿಸುತ್ತಿದ್ದ ನಾಲ್ಕು ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದ ರಭಸಕ್ಕೆ ರಮೇಶ್ ಎಂಬುವವರ ಕಾಲು ಮುರಿದಿದ್ದು, ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಳಿಕ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಚಾಲಕ ಅಭಿಲಾಷ್ನನ್ನು ಕಾರಿನಿಂದ ಕೆಳಗಿಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಹದೇವಪುರ ಸಂಚಾರಿ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಗಾಯಾಳು ಅಭಿಲಾಷ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆರೋಪಿ ಪೊಲೀಸರ ಕಣ್ಗಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.