ಬೆಂಗಳೂರು ಡಿಸೆಂಬರ್ 04: ಒಂದು ಕಡೆ ಟೊಮಾಟೋ ಬೆಲೆ ಏರಿಕೆಯಾಗುತ್ತಿದ್ದರೆ ಇನ್ನೊಂದೆಡೆ ನುಗ್ಗೆಕಾಯಿ ಬೆಲೆ ಗಗನಕ್ಕೇರಿದೆ. ಚಿನ್ನಕ್ಕಿಂತಲೂ ವೇಗವಾಗಿ ನುಗ್ಗೆಕಾಯಿ ಬೆಲೆ ಏರಿಕೆಯಾಗುತ್ತಿದ್ದು,. ಇದೀಗ ಒಂದು ನುಗ್ಗೆಕಾಯಿಗೆ 50 ರೂಪಾಯಿ ಇದ್ದು, ಕೆಜಿ 600 ಗಡಿಗಾಟಿದೆ.


ನುಗ್ಗೆ ಎಲೆ, ಹೂವು, ಕಾಯಿಯಲ್ಲಿ ಕಬ್ಬಿಣಾಂಶ ಮತ್ತು ಪೋಷಕಾಂಶಗಳು ಹೆಚ್ಚಿರುವುದರಿಂದ ಹೆಚ್ಚಿನ ಜನ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಮದುವೆ ಮತ್ತಿತರ ಶುಭ ಕಾರ್ಯಗಳಲ್ಲಿ ಸಾಂಬಾರಿಗೆ ನುಗ್ಗೆಕಾಯಿಯನ್ನು ಕಡ್ಡಾಯವಾಗಿ ಬಳಸುತ್ತಾರೆ. ಇದು ರುಚಿಯೂ ಹೆಚ್ಚು. ಆರೋಗ್ಯಕ್ಕೂ ಒಳಿತು. ಹೀಗಾಗಿ, ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ದುಬಾರಿಯಾಗಿದೆ.

ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ನುಗ್ಗೆಕಾಯಿ ತಮಿಳುನಾಡಿನಿಂದ ಆಗಮಿಸುತ್ತದೆ. ಆದರೆ, ಅಲ್ಲಿ ಈ ಬಾರಿ ನುಗ್ಗೆ ಬೆಳೆ ತಡವಾಗಿ ಬಂದಿರುವುದರಿಂದ ಈಗ ಶೇ. 60ರಷ್ಟು ನುಗ್ಗೆಕಾಯಿ ಪೂರೈಕೆ ಕುಸಿತ ಕಂಡಿದೆ. ಜತೆಗೆ ಶ್ರೀಲಂಕಾದಲ್ಲಿ ‘ದಿತ್ವಾ’ ಚಂಡಮಾರುತ ಅಪ್ಪಳಿಸಿರುವುದರಿಂದ ಇದು ತಮಿಳುನಾಡು ಹಾಗೂ ಕರ್ನಾಟಕದ ಮೇಲೆಯೂ ಪರಿಣಾಮ ಬೀರಿದೆ. ಹೀಗಾಗಿ, ತಮಿಳುನಾಡಿನಿಂದ ಬರುತ್ತಿದ್ದ ನುಗ್ಗೆಕಾಯಿ ಪ್ರಮಾಣದಲ್ಲಿ ಶೇ. 60ರಷ್ಟು ಪೂರೈಕೆ ಕುಸಿತವಾಗಿದೆ. ಜತೆಗೆ, ಕರ್ನಾಟಕದಲ್ಲೂ ಈಗ ನುಗ್ಗೆ ಸೀಸನ್‌ ಇಲ್ಲ. ಹೀಗಾಗಿ, ಬೆಲೆಗಳು ದಿಢೀರ್‌ ಏರಿಕೆಯಾಗಿವೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ನುಗ್ಗೆಕಾಯಿ ಬೆಲೆ 500 ರಿಂದ 600 ರೂಪಾಯಿವರೆಗೂ ಏರಿಕೆಯಾಗಿದೆ. ಕಳೆದ ತಿಂಗಳ ಆರಂಭದಲ್ಲಿ ನುಗ್ಗೆಕಾಯಿ ದರ ಕೆ.ಜಿ.ಗೆ 150 – 200 ರೂ.ಗಳ ಆಸುಪಾಸಿನಲ್ಲಿತ್ತು. ಒಂದೇ ವಾರದ ಅಂತರದಲ್ಲಿ ಮೂರು ಪಟ್ಟು ದರ ಜಿಗಿದಿದೆ. ಇನ್ನೂ ಒಂದೆರಡು ತಿಂಗಳು ದರ ಇದೇ ಸ್ಥಿತಿಯಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.

ಚಿಲ್ಲರೆ ದರದಲ್ಲಿ ಕೆ.ಜಿ.ಗೆ 700 ರೂ.ವರೆಗೆ ಮಾರುತ್ತಿದ್ದಾರೆ. ಚಿಲ್ಲರೆ ಮಾರಾಟಗಾರರು 10 ರೂ.ಗೆ 3 ಕಾಯಿ ಕೊಡುತ್ತಿದ್ದವರು, ಈಗ 50 ರೂಪಾಯಿಗೆ 2 ಕಾಯಿ ಕೊಡುತ್ತಿದ್ದಾರೆ. ಬೆಲೆ ಜಾಸ್ತಿಯಾಗಿದೆ ಎಂದು ಕೆಲ ಮಾರಾಟಗಾರರು ನುಗ್ಗೆಕಾಯಿ ಮಾರುವುದನ್ನೇ ಬಿಟ್ಟಿದ್ದಾರೆ. ಇನ್ನು ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ. ನುಗ್ಗೆಕಾಯಿಗೆ 510 ರೂ. ದರವಿದೆ.

Share Information