ಮಂಗಳೂರು ನವೆಂಬರ್ 08: ಕಾಲೇಜು ವಿಧ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನುಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 24.57 ಗ್ರಾಂ ತೂಕದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ನಗರದ ಬಂದರು ಮತ್ತು ದಕ್ಕೆಯ ಪರಿಸರದಲ್ಲಿ ಆಟೋ ರಿಕ್ಷಾದಲ್ಲಿ ಇಟ್ಟುಕೊಂಡು ಮಾದಕವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ಆಟೋ ಚಾಲಕ ಅಡ್ಯಾರ್ ಕಣ್ಣೂರು ನಿವಾಸಿ ದಯಾಂಬು ಎಚ್.ಎಸ್. ನಗರದ ಅಬ್ದುಲ್ ಸಲಾಮ್ (39) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆತನ ಬಳಿಯಿಂದ 1.20 ಲಕ್ಷ ರೂ. ಮೌಲ್ಯದ ಎಂಡಿಎಂಎ, ಆಟೋ ರಿಕ್ಷಾ, ಮೊಬೈಲ್ ಪೋನ್, ತೂಕಮಾಪನ, ಖಾಲಿ ಜಿಪ್ ಲಾಕ್ ಕವರ್ ಸಹಿತ ಒಟ್ಟು ರೂ. 2,30,500 ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬೋಳಿಯಾರು ಪರಿಸರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು, ಬೋಳಿಯಾರ್ ಜಾರದಗುಡ್ಡೆ ನಿವಾಸಿ ಮೊಹಮ್ಮದ್ ನಾಸೀರ್ ಯಾನೆ ಶಾಕೀರ್ ಚಾಕಿ (28) ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ 1.20 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಎಂಡಿಎಂಎ, ಕಪ್ಪು ಬಣ್ಣದ ಯಮಹಾ ಬೈಕ್, ಮೊಬೈಲ್ ಪೋನ್, ಖಾಲಿ ಜಿಪ್ ಲಾಕ್ ಕವರ, ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮಾದಕವಸ್ತು ಮಾರಾಟ/ಸಾಗಾಟ ಜಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



