ಬ್ರೆಜಿಲ್,ಫೆಬ್ರವರಿ 18: ಹಬ್ಬಗಳ ಜನ ಸಂದಣಿಯನ್ನು ಗುರಿಯಾಗಿಸಿಕೊಂಡು ಮೊಬೈಲ್ ಕಳ್ಳತನಕ್ಕಿಳಿದಿದ್ದ ಗ್ಯಾಂಗ್ ವೊಂದನ್ನು ಚಾಣಾಕ್ಷತನದಿಂದ ಅವರದೇ ರೀತಿಯ ತಂತ್ರವನ್ನು ಬಳಸಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.

ಸ್ಕೂಬಿ ಡೂ ಕಾರ್ಟೂನ್ ನಲ್ಲಿ ಬರುವ ಪಾತ್ರಧಾರಿಗಳಾದ ಸ್ಕೂಬಿ ಡೂ, ಶಾಗ್ಗಿ, ವೆಲ್ಮಾ, ಫ್ರೆಡ್ ಮತ್ತು ಡ್ಯಾಫ್ನೆ ಪಾತ್ರದ ವೇಷವನ್ನು ಹಾಕಿಕೊಂಡು ತಂಡವೊಂದು ಮೊಬೈಲ್ ಕಳ್ಳತನಕ್ಕೆ ಇಳಿದಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಂಧಿಸಿದ್ದಾರೆ. ಈ ಕಳ್ಳರಲ್ಲಿ ಒಬ್ಬೊಬ್ಬರ ಬಳಿ ಕನಿಷ್ಠವೆಂದರೂ ಎಂಟು ಫೋನ್ ಗಳು ಪತ್ತೆಯಾಗಿವೆ. ಹೆಚ್ಚಿನ ತನಿಖೆಗಾಗಿ ಸಾವೊ ಪಾಲೊ ಪೊಲೀಸ್ ಠಾಣೆಗೆ ಕಳ್ಳರನ್ನು ಕರೆದೊಯ್ಯುವ ಮೊದಲು ಪೊಲೀಸ್ ಅಧಿಕಾರಿಗಳು ಸಾಧನಗಳನ್ನು ಅವುಗಳ ನಿಜವಾದ ಮಾಲೀಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಡರ್ ಕವರ್ ಪೊಲೀಸರು ಈ ಮೊಬೈಲ್ ಕಳ್ಳತನ ವಿಚಾರದಲ್ಲಿ ನಿಗಾ ಇಟ್ಟಿದ್ದು ಕೊನೆಗೂ ಪ್ರಕರಣದ ನೈಜವಾದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪೊಲೀಸರು ಈ ಕಳ್ಳರನ್ನು ಹಿಡಿಯಲು ನೆಟ್ ಫ್ಲಿಕ್ಸ್ ನಲ್ಲಿ ಬಂದಿದ್ದ ಫೇಮಸ್ ಸೀರೀಸ್ ಸ್ಕ್ವಿಡ್ ಗೇಮ್ ನಲ್ಲಿ ಸ್ಕ್ವಿಡ್ ಗೇಮ್ ವೇಷವೊಂದನ್ನು ಬಳಸಿಕೊಂಡಿರುವುದು ವಿಶೇಷ.



