ಕೊಲ್ಲಂ, ಮಾರ್ಚ್ 21: ಕೇರಳದ ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸಿದ್ದ ಯುವ ವೈದ್ಯೆ ಡಾ. ವಂದನಾ ದಾಸ್ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲ್ಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ. ಅಪರಾಧಿ ಜಿ. ಸಂದೀಪ್ಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಆ ಅವಧಿ ಮುಗಿದ ನಂತರ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಕೊಟ್ಟಾಯಂ ಜಿಲ್ಲೆಯ ಡಾ. ವಂದನಾ ದಾಸ್, ಅಜೀಜಿಯಾ ವೈದ್ಯಕೀಯ ಕಾಲೇಜಿನಲ್ಲಿ ಹೌಸ್ ಸರ್ಜನ್ ಆಗಿದ್ದರು. ಅವರು ತಮ್ಮ ತರಬೇತಿಯ ಭಾಗವಾಗಿ ಕೊಟ್ಟಾರಕ್ಕರ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 2023ರ ಮೇ 10ರಂದು ಈ ಭೀಕರ ಕೃತ್ಯ ನಡೆದಿತ್ತು. ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿದ್ದ ಆರೋಪಿ ಸಂದೀಪ್ ನನ್ನು ಕಾಲಿನ ಗಾಯಕ್ಕೆ ಚಿಕಿತ್ಸೆ ಕೊಡಿಸಲು ಪೊಲೀಸರು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ತರಬೇತಿ ನಿರತ ವೈದ್ಯೆ ಡಾ. ವಂದನಾ ಅವರು ಆರೋಪಿಯ ಗಾಯಕ್ಕೆ ಬ್ಯಾಂಡೇಜ್ ಹಾಕುತ್ತಿದ್ದರು. ಆ ಸಮಯದಲ್ಲಿ ಏಕಾಏಕಿ ಉದ್ರಿಕ್ತನಾದ ಸಂದೀಪ್, ಅಲ್ಲೇ ಇದ್ದ ಶಸ್ತ್ರಚಿಕಿತ್ಸಾ ಕತ್ತರಿಯಿಂದ ವಂದನಾ ಅವರ ಮೇಲೆರಗಿ ಅಮಾನವೀಯವಾಗಿ 27 ಬಾರಿ ಇರಿದು ಹಲ್ಲೆ ನಡೆಸಿದ್ದನು. ತೀವ್ರವಾಗಿ ಗಾಯಗೊಂಡಿದ್ದ ವಂದನಾ ಅವರನ್ನು ಕೂಡಲೇ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.
ಇಂದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಜಿ. ಸಂದೀಪ್ನನ್ನು ಅಪರಾಧಿ ಎಂದು ಘೋಷಿಸಿತು. “ಅಪರಾಧಿಯು ಮೊದಲು 30 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು, ಆ ಅವಧಿ ಪೂರ್ಣಗೊಂಡ ನಂತರವಷ್ಟೇ ಆತನ ಜೀವಾವಧಿ ಶಿಕ್ಷೆ ಆರಂಭವಾಗಲಿದೆ,” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತಾಪ್ ಜಿ. ಪಡಿಕ್ಕಲ್ ಅವರು ಈ ಕೃತ್ಯದ ಭೀಕರತೆಯನ್ನು ಪರಿಗಣಿಸಿ ಅಪರಾಧಿಗೆ ಮರಣದಂಡನೆ ವಿಧಿಸುವಂತೆ ಪ್ರಬಲವಾಗಿ ವಾದಿಸಿದ್ದರು. ಆದರೆ, ನ್ಯಾಯಾಲಯವು ಇದನ್ನು “ಅಪರೂಪದಲ್ಲಿ ಅಪರೂಪದ ಪ್ರಕರಣ” ಎಂದು ಪರಿಗಣಿಸದ ಕಾರಣ ಗಲ್ಲು ಶಿಕ್ಷೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ, ಶಿಕ್ಷೆಯನ್ನು ಮರಣದಂಡನೆಗೆ ಏರಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಡಾ. ವಂದನಾ ಅವರ ಪೋಷಕರು ಕಣ್ಣೀರಿಡುತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನನ್ನ ಮಗಳಿಗೆ 27 ಬಾರಿ ಇರಿದು ಕೊಂದ ಕ್ರೂರಿಗೆ ಮರಣದಂಡನೆಯೇ ಸೂಕ್ತ ಶಿಕ್ಷೆಯಾಗಿತ್ತು. ಆತ ಅನುಭವಿಸುತ್ತಿರುವ ಶಿಕ್ಷೆ ನನ್ನ ಮಗಳು ಅನುಭವಿಸಿದ ನೋವಿಗೆ ಸಮನಲ್ಲ,” ಎಂದು ಅವರು ಕಣ್ಣೀರು ಹಾಕಿದ್ದಾರೆ.