Connect with us

    DAKSHINA KANNADA

    ಪುತ್ತೂರು ಡಬ್ಬಲ್ ಮರ್ಡರ್ ನಡೆದು ಎರಡು ದಿನ ಆಗಿತ್ತು……?

    ಪುತ್ತೂರು ಡಬ್ಬಲ್ ಮರ್ಡರ್ ನಡೆದು ಎರಡು ದಿನ ಆಗಿತ್ತು……?

    ಪುತ್ತೂರು ನವೆಂಬರ್ 19: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕುರಿಯ ಎನ್ನುವ ಗ್ರಾಮದ ಮನೆಯೊಂದರಲ್ಲಿ ಇಬ್ಬರ ನಿಗೂಢ ಕೊಲೆಯಾದ ಘಟನೆ ನಡೆದಿದೆ. ಕುರಿಯ ಗ್ರಾಮದ ಅಜಲಾಡಿ ನಿವಾಸಿ ಕೊಗ್ಗು ಸಾಹೇಬ್ ಮತ್ತು ಆತನ ಮೊಮ್ಮಗಳು ಸಮಿಹಾಳನ್ನು ಆಗಂತುಕರು ಕೊಚ್ಚಿ ಕೊಲೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಕೊಗ್ಗು ಸಾಹೇಬರ ಪತ್ನಿ ಖತಿಜಾ ಅವರ ಮೇಲೂ ಮಾರಕಾಯುಧಗಳಿಂದ ದಾಳಿ ನಡೆಸಲಾಗಿದ್ದು, ಅವರನ್ನು ಘಟನೆ ನಡೆದ ಎರಡು ದಿನಗಳ ಬಳಿಕ ರಕ್ಷಿಸಲಾಗಿದೆ.

    ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಜಲಾಡಿ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಇಬ್ಬರನ್ನು ಕೊಚ್ಚಿ ಕೊಂದು ಹಾಕಿ, ಇನ್ನೋರ್ವ ಮಹಿಳೆಗೆ ಗಂಭೀರ ಗಾಯಗೊಳಿಸಿ ಪರಾರಿಯಾದ ಘಟನೆ ನಡೆದಿದೆ. ಕೊಗ್ಗು ಸಾಹೇಬ್ (65) ಮತ್ತು ಆತನ ಮೊಮ್ಮಗಳು ಸಮಿಹಾ (13) ಆಗಂತುಕರಿಂದ ಸಾವಿಗೀಡಾದ ನತದೃಷ್ಟರಾಗಿದ್ದು, ಗಂಭೀರ ಗಾಯಗೊಂಡಿದ್ದ ಕೊಗ್ಗು ಸಾಹೇಬರ ಪತ್ನಿ ಖತಿಜಾರನ್ನು ರಕ್ಷಿಸಲಾಗಿದೆ. ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದ್ದು, ಮನೆಗೆ ಬಂದಿದ್ದ ಕೊಗ್ಗು ಸಾಹೇಬರ ಮಗನಿಂದ ಈ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆ ಭಾನುವಾರ ನಡೆದಿರುವ ಸಾಧ್ಯತೆಯಿದ್ದು, ಮಗ ಮನೆಗೆ ಬಂದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ದರೋಡೆಗಾಗಿ ಈ ಕೃತ್ಯ ನಡೆದಿರುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದು, ಪೋಲೀಸರು ಸ್ಥಳ ಪರಿಶೀಲನೆಯನ್ನು ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತನಿಖೆಯೂ ಆರಂಭವಾಗಿದೆ.

    ಕೊಗ್ಗು ಸಾಹೇಬ್ ಗೆ ಮೂರು ಗಂಡು ಮಕ್ಕಳು ಹಾಗೂ ಎರಡು ಹೆಣ್ಣು ಮಕ್ಕಳಿದ್ದು, ಕೊಗ್ಗು ಸಾಹೇಬರೊಂದಿಗೆ ಸಾವಿಗೀಡಾದ ಸಮಿಹಾ ಆತನ ಮೊದಲ ಮಗಳ ಮಗಳಾಗಿದ್ದಾಳೆ. ಒರ್ವ ಪುತ್ರಿ ವಿದೇಶದಲ್ಲಿದ್ದು, ಉಳಿದ ಮಕ್ಕಳ ಇತರ ಕಡೆಗಳಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡಿದ್ದಾರೆ. ಕಳೆದ ದಸರಾ ರಜೆಯ ಬಳಿಕ ಸಮಿಹಾ ಅಜ್ಜ-ಅಜ್ಜಿಯೊಂದಿಗೆ ಕುರಿಯಾದಲ್ಲೇ ಇದ್ದು, ಅಲ್ಲೇ ಶಾಲೆಗೆ ಸೇರಿಕೊಂಡಿದ್ದಳು. ಪೋಲೀಸರ ಸ್ಥಳ ತನಿಖೆಯ ಬಳಿಕ ಈ ಘಟನೆ ನಡೆದು ಎರಡು ದಿನಗಳು ಕಳೆದಿದ್ದು, ದರೋಡೆ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

    ಮನೆಯಲ್ಲಿದ್ದ ಚಿನ್ನದ ಆಭರಣಗಳು ಹಾಗೆಯೇ ಇದ್ದು, ಇದು ದರೋಡೆಗಾಗಿ ನಡೆದ ಕೃತ್ಯ ಅಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಘಟನೆ ನಡೆದ ಮನೆ ವಾಹನ ಓಡಾಟ ಹೆಚ್ಚಾಗಿರುವ ರಸ್ತೆ ಪಕ್ಕದಲ್ಲೇ ಇದ್ದು, ಇದು ಮನೆಗೆ ಸಂಬಂಧಿಸಿದ ವ್ಯಕ್ತಿಗಳಿಂದಲೇ ನಡೆದಿರುವ ಕೃತ್ಯ ಎನ್ನುವ ಸಾಧ್ಯತೆಯೂ ಹೆಚ್ಚಾಗಿದೆ.

    ಈ ನಡುವೆ ಕೃತ್ಯ ನಡೆಸಿರುವ ವ್ಯಕ್ತಿಗಳಿಂದ ಮಾರಕಾಯುಧಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಕೊಗ್ಗು ಸಾಹೇಬರ ಪತ್ನಿ ಎರಡು ದಿನಗಳ ಕಾಲ ಯಾರ ಸಹಾಯವೂ ಇಲ್ಲದೆ ಮನೆಯಲ್ಲೇ ಇದ್ದರೆನ್ನುವ ವಿಚಾರದಲ್ಲೂ ಗೊಂದಲ ಮೂಡಲಾರಂಭಿಸಿದೆ. ಪೋಲೀಸ್ ಮೂಲಗಳ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ಪೋಲೀಸರು ಈಗಾಗಲೇ ಇಬ್ಬರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವುದೂ ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply