LATEST NEWS
ಮಹಿಳೆಯರು ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಮಹಿಳೆಯರು ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಮಂಗಳೂರು ಮಾರ್ಚ್ 11: ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ರಾಜಕೀಯ ಪಕ್ಷಗಳು, ಸೀರೆ, ಮಿಕ್ಸಿ, ಕುಕ್ಕರ್ ಮತ್ತಿತರ ದಿನ ಬಳಕೆಯ ವಸ್ತುಗಳನ್ನು ನೀಡುವುದರ ಮೂಲಕ ಆಮಿಷ ಒಡ್ಡಲಿದ್ದು, ಮಹಿಳೆಯರು ರಾಜಕೀಯ ಪಕ್ಷಗಳ ಯಾವುದೇ ಆಮಿಷಗಳಿಗೆ ಒಳಗಾಗದೇ, ಮುಕ್ತ ಮತ್ತು ನಿರ್ಭಿತಿಯಿಂದ ತಮ್ಮ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಇಂದು ನಡೆದ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ನೆರೆದಿದ್ದ ಮಹಿಳೆಯರನ್ನ ಉದ್ದೇಶಿಸಿ ಮಾತನಾಡಿದರು.
ಮಹಿಳೆಯರಿಗೆ ಪ್ರಥಮವಾಗಿ ಸಮಾನತೆಯ ಹಕ್ಕು , ಮತದಾನದ ಮೂಲಕ ಬಂದಿದೆ, ಮಹಿಳೆಯರು ತಮಗೆ ದೊರೆತ ಈ ಹಕ್ಕನ್ನು ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳ ಆಮಿಗಳಿಗೆ ಬಲಿ ಕೊಡಬೇಡಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಕುರಿತಂತೆ ಸಮೀಪದ ಬಿ.ಎಲ್.ಓ ಗಳ ಬಳಿ ಪರಿಶೀಲಿಸಿ, ಪಟ್ಟಿಯಲ್ಲಿ ಹೆಸರು ಇಲ್ಲವಾದರೆ ಸೇರಿಸಲು ಅವಕಾಶವಿದೆ, ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬ ಮಹಿಳೆಯೂ ತಪ್ಪದೇ ಮತ ಚಲಾಯಿಸಿ, ತಾವು ಮತ ಚಲಾಯಿಸದೇ ಇದ್ದಲ್ಲಿ ಶೋಷಣೆ, ದೌರ್ಜನ್ಯ ಪ್ರಶ್ನಿಸುವ ಅವಕಾಶ ಕಳೆದುಕೊಳ್ಳುತ್ತೀರಾ, ಆದ್ದರಿಂದ ಯೋಗ್ಯ ವ್ಯಕ್ತಿಗೆ ಮತ ನೀಡಿ, ಪ್ರಜಾಪ್ರಭುತ್ವ ತಮಗೆ ನೀಡಿರುವ ಅಧಿಕಾರ ಚಲಾಯಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ನೈತಿಕ ಮತದಾನಕ್ಕೆ ಚುನಾವಣಾ ಆಯೋಗ ಹೆಚ್ಚಿನ ಒತ್ತು ನೀಡಿದ್ದು, ಪ್ರತಿಯೊಬ್ಬರೂ ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೇ , ತಮ್ಮ ಮನಃಸಾಕ್ಷಿಗೆ ಯೋಗ್ಯ ಅನಿಸುವಂತಹ ವ್ಯಕ್ತಿಗೆ ಮತ ಚಲಾಯಿಸಿ, ಮನೆಯಲ್ಲಿ ಹಾಸಿಗೆ ಹಿಡಿದಿರುವ ಮತ್ತು ವಿಕಲಚೇತನ ವ್ಯಕ್ತಿಗಳಿಗೆ ಸಹ ಮತ ಚಲಾವಣೆಗೆ ಅನುಕೂಲವಾಗುವಂತೆ ಜಿಲ್ಲಾಡಳಿತದಿಂದಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದ್ದು, ರಾಜಕೀಯ ಪಕ್ಷಗಳು ಕಳುಹಿಸುವ ವಾಹನಗಳನ್ನು ಬಳಸಬೇಡಿ, ಮತಗಟ್ಟೆಗಳಲ್ಲಿಯೂ ಸಹ ರೋಗಿಗಳಿಗೆ , ವೃದ್ದರಿಗೆ ಮತ್ತುವಿಕಲಚೇತನರಿಗೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಿಯಾಂಕ ಹೇಳಿದರು.
ಇದೇ ಸಂದರ್ಭದಲ್ಲಿ ನೆರೆದಿದ್ದ ಎಲ್ಲರಿಗೂ, ಯಾವುದೇ ಆಮಿಷಗಳಿಗೆ , ಒತ್ತಡಗಳಿಗೆ ಒಳಗಾಗದೇ ಮತ ಚಲಾಯಿಸುವ ಕುರಿತಂತೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
You must be logged in to post a comment Login