ವಾಷಿಂಗ್ಟನ್: ಜಾಗತಿಕ ರಾಜತಾಂತ್ರಿಕ ರಂಗದಲ್ಲಿ ದಶಕಗಳ ಶೀತಲ ಸಮರಕ್ಕೆ ಬ್ರೇಕ್ ಬಿದ್ದಿದ್ದು, ಅಮೆರಿಕ ಮತ್ತು ಇರಾನ್ ದೇಶಗಳು ಐತಿಹಾಸಿಕ 14 ಅಂಶಗಳ ಮಹತ್ವದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ಈ ಒಪ್ಪಂದಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸೇನಾ ಕಾರ್ಯಾಚರಣೆಗಳ ತಕ್ಷಣದ ಅಂತ್ಯ, ವಿಶ್ವ ತೈಲ ಮಾರುಕಟ್ಟೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಕಡಲ ಸಂಚಾರಕ್ಕೆ ಮುಕ್ತಗೊಳಿಸುವುದು, ಇರಾನ್ ಮೇಲಿನ ಕಠಿಣ ಆರ್ಥಿಕ ನಿರ್ಬಂಧಗಳ ತೆರವು ಹಾಗೂ ಇರಾನ್ನ ಪರಮಾಣು ಯೋಜನೆ ಕುರಿತು ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಲು 60 ದಿನಗಳ ಕಾಲಮಿತಿಯ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ.
ಪ್ಯಾರಿಸ್ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿಯೇ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಈ ಒಪ್ಪಂದದ ಕರಡು ಪ್ರತಿಗೆ ಸಹಿ ಹಾಕಿದ್ದರು ಎಂದು ಶ್ವೇತಭವನದ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ (CNN) ವರದಿ ಮಾಡಿದೆ. ಇತ್ತ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರೂ ಒಪ್ಪಿಗೆ ಸೂಚಿಸಿ ಸಹಿ ಮಾಡಿರುವುದರಿಂದ ಈ ಐತಿಹಾಸಿಕ ಒಪ್ಪಂದವು ತಕ್ಷಣದಿಂದಲೇ ಜಾರಿಗೆ ಬಂದಿದೆ. ಈ ಒಪ್ಪಂದದನ್ವಯ ಇರಾನ್ ತಾನು ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂದು ಜಾಗತಿಕ ಸಮುದಾಯದ ಮುಂದೆ ಪುನರುಚ್ಚರಿಸಿದೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಯಿ ಒಪ್ಪಂದವನ್ನು ದೃಢಪಡಿಸಿದ್ದು, ಹೊರ್ಮುಜ್ ಜಲಸಂಧಿ ಮೇಲಿನ ಇರಾನ್ನ ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ಸುರಕ್ಷಿತ ಕಡಲ ಸಂಚಾರವನ್ನು ಖಚಿತಪಡಿಸಲಾಗುವುದು ಎಂದಿದ್ದಾರೆ. ಈ ಒಪ್ಪಂದವು ಲೆಬನಾನ್ ಸೇರಿದಂತೆ ಇತರ ಕಡೆಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಮತ್ತು ಶಾಶ್ವತವಾಗಿ ನಿಲ್ಲಿಸಲು ಸೂಚಿಸುತ್ತದೆ. ಇರಾನ್ನ ನಿಯಮಬದ್ಧತೆಗೆ ಅನುಗುಣವಾಗಿ ಹಂತ ಹಂತವಾಗಿ ಆರ್ಥಿಕ ನಿರ್ಬಂಧಗಳ ಸಡಿಲಿಕೆ, ಮುಟ್ಟುಗೋಲು ಹಾಕಿಕೊಳ್ಳಲಾದ ಇರಾನ್ನ ಆಸ್ತಿ ಬಿಡುಗಡೆ ಹಾಗೂ ಇರಾನ್ಗಾಗಿ ಅಮೆರಿಕದ ಬೆಂಬಲದೊಂದಿಗೆ ಕನಿಷ್ಠ 300 ಶತಕೋಟಿ ಯುಎಸ್ ಡಾಲರ್ ಮೌಲ್ಯದ ಭಾರಿ ಪುನರ್ನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿ ಪ್ಯಾಕೇಜ್ ಅನ್ನು ಈ ಒಪ್ಪಂದ ಒಳಗೊಂಡಿದೆ.