ಚೆನ್ನೈ: ತಮಿಳುನಾಡಿನ ವಸತಿ ಪ್ರದೇಶವೊಂದರಲ್ಲಿ ಸಾಕು ನಾಯಿಯೊಂದು ತಾಯಿ ಮತ್ತು ಮಗಳ ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ ಆತಂಕಕಾರಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾಳಿಯ ವೇಳೆ ಸಹಾಯ ಮಾಡುವ ಬದಲು ಮಾಲೀಕರು ಮನೆಯ ಗೇಟ್ ಮುಚ್ಚಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮನೆಯ ಆವರಣದೊಳಗಿದ್ದ ನಾಯಿಯು ಇದ್ದಕ್ಕಿದ್ದಂತೆ ರಸ್ತೆಗೆ ನುಗ್ಗಿ ಮೊದಲು ಬಾಲಕಿಯ ಮೇಲೆ ದಾಳಿ ಮಾಡಿದೆ. ಮಗಳನ್ನು ರಕ್ಷಿಸಲು ಬಂದ ತಾಯಿಯ ಮೇಲೂ ನಾಯಿ ಎರಗಿದ್ದು, ಇಬ್ಬರನ್ನೂ ರಸ್ತೆಯಲ್ಲೇ ಎಳೆದಾಡಿ ತೀವ್ರವಾಗಿ ಗಾಯಗೊಳಿಸಿದೆ. ಗದ್ದಲ ಕೇಳಿ ಮನೆಯಿಂದ ಹೊರಬಂದ ಮಾಲೀಕರು (ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ), ನಾಯಿಯನ್ನು ನಿಯಂತ್ರಿಸುವ ಬದಲು ಗೇಟ್ ಮುಚ್ಚಿ ಒಳಗೆ ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.