ದೊಡ್ಡಬಳ್ಳಾಪುರ ಮೇ 06: ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಕಾರಿನಲ್ಲೇ ಸುಟ್ಟು ಕೊಲೆ ಮಾಡಿದ ಆರೋಪಿ, ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಬಳಿ ನಡೆದಿದೆ.

ದೇವನಹಳ್ಳಿಯ ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕಿ ಸರೋಜಾ (40) ಕೊಲೆಯಾದವರು. ಇವರಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ರಾಮಾಂಜಿ (45) ಎಂಬಾತ ಮದುವೆಯಾಗುವಂತೆ ಪೀಡಿಸುತ್ತಿದ್ದ. ವಿಚ್ಛೇದಿತೆಯಾಗಿದ್ದ ಸರೋಜಾ ಮದುವೆಗೆ ಒಪ್ಪದ ಕಾರಣ ಆಕ್ರೋಶಗೊಂಡ ರಾಮಾಂಜಿ, ಲಾಂಗ್ ಡ್ರೈವ್ ನೆಪದಲ್ಲಿ ಆಕೆಯನ್ನು ಜಿಂಕೆಬಚ್ಚಹಳ್ಳಿಯ ನಿರ್ಜನ ಪ್ರದೇಶಕ್ಕೆ ಕರೆತಂದು ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಕಾರಿನೊಳಗೆ ಇರಿಸಿ ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಸುಟ್ಟ ಮೃತದೇಹದ ಮೇಲೆ ಪತ್ತೆಯಾದ ಮಾಂಗಲ್ಯ ಸರ ಮತ್ತು ಕಾಲು ಚೈನು ಪೊಲೀಸರಿಗೆ ತನಿಖೆಯಲ್ಲಿ ಪ್ರಮುಖ ಸುಳಿವು ನೀಡಿತು. ಇದರ ಆಧಾರದ ಮೇಲೆ ತನಿಖೆ ನಡೆಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮೃತರನ್ನು ಗುರುತಿಸಿದರು. ಪೊಲೀಸರು ತನ್ನನ್ನು ಬೆನ್ನಟ್ಟುತ್ತಿರುವ ಭಯದಿಂದ ಆರೋಪಿ ರಾಮಾಂಜಿ ಬಿಡದಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಲ್ಲಾ ಎಸ್ಪಿ ಎಂ.ವಿ. ಚಂದ್ರಕಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.