LATEST NEWS
ವೈದ್ಯರ ಮಷ್ಕರ – ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ನಿರಂತರ ಲಭ್ಯ

ವೈದ್ಯರ ಮಷ್ಕರ – ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ನಿರಂತರ ಲಭ್ಯ
ಮಂಗಳೂರು ನವೆಂಬರ್ 3: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ತಿದ್ದುಪಡಿಗೆ ರಾಜ್ಯ ಸರಕಾರ ಮುಂದಾಗಿದೆ. ಜಿಲ್ಲಾ ಕುಂದುಕೊರತೆ ಸಮಿತಿ ರಚನೆ ಹಾಗೂ ಚಿಕಿತ್ಸಾ ವೈಫಲ್ಯ ಅಥವಾ ರೋಗಿ ಆಸ್ಪತ್ರೆ ವೆಚ್ಚ ಏರುಪೇರಾದಲ್ಲಿ ಜೈಲು ಶಿಕ್ಷೆ ವಿಧಿಸುವ ಅಂಶ ತಿದ್ದುಪಡಿಯಲ್ಲಿದೆ. ಇದನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳು ಇಂದು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳು ಎಂದಿನಂತೆ ಸಾರ್ವಜನಿಕರಿಗೆ ಲಭ್ಯವಾಗಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ .
ಜಿಲ್ಲೆಯಲ್ಲಿರುವ ಎಲ್ಲಾ 65 ಪ್ರಾಥಮಿಕ ಆರೋಗ್ಯ ಕೇಂದ್ರ, 7 ಸಮುದಾಯ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ನಿರಂತರವಾಗಿ ಇಂದು ಲಭ್ಯವಿರಲಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ಮತ್ತು ಒಳರೋಗಿ ವಿಭಾಗ ಸೇರಿದಂತೆ ಶಸ್ತ್ರಚಿಕಿತ್ಸೆಗಳ ಸೌಲಭ್ಯವೂ ಸಾರ್ವಜನಿಕರಿಗೆ ಇಂದು ಲಭ್ಯವಿರಲಿದೆ.

ತಾಲೂಕು ಆಸ್ಪತ್ರೆಗಳಲ್ಲಿ ಸ್ಪೆಷಾಲಿಸ್ಟ್ ಡಾಕ್ಟರ್ ಗಳು ಚಿಕಿತ್ಸೆ ನೀಡುತ್ತಿದ್ದಾರೆ. ಇಂದು ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದು ರಜೆಯಲ್ಲಿರುವ ವೈದ್ಯರನ್ನೂ ಕರ್ತವ್ಯಕ್ಕೆ ಕರೆಯಲಾಗಿದೆ.
ಹೀಗಾಗಿ ಸಾರ್ವಜನಿಕರು ಚಿಕಿತ್ಸೆ ಹಾಗು ತುರ್ತು ಚಿಕಿತ್ಸೆಗೆ ಇಂದು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ . ಆರೋಗ್ಯ ಇಲಾಖೆಯ 17 ಅಂಬ್ಯುಲೆನ್ಸ್ ಗಳು ಹಾಗೂ 108 ಆರೋಗ್ಯ ಕವಚ ಅಂಬ್ಯಲೆನ್ಸ್‍ಗಳು ಸಾರ್ವಜನಿಕರಿಗೆ ಸೇವೆ ನೀಡಲು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಮಂಗಳೂರಿನ ಸರಕಾರಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದ್ದು ಎಂದಿನಂತೆ ಇಂದು ಕೂಡ ವೈದ್ಯಕೀಯ ಚಿಕಿತ್ಸೆಗಳು ಸಾರ್ವಜನಿಕರಿಗೆ ದೊರಕುತಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ ಗಳಲ್ಲಿ ಇಂದು 24 ಗಂಟೆ ನಿರಂತರ ಸೇವೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.