ಭಾರಿ ವಿವಾದಕ್ಕೆ ಕಾರಣವಾದ ನಳಿನ್ ಕುಮಾರ್ “ಕ್ರೂರ ಕೊಲೆಗಾರ ಯಾರು ?” ಟ್ವೀಟ್

ಮಂಗಳೂರು ಮೇ 17: ದಕ್ಷಿಣಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಟ್ವಿಟ್ ಒಂದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಚೆನೈನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ನಟ ಕಮಲ್ ಹಾಸನ್ ಗಾಂಧೀಜಿ ಹತ್ಯೆ ಮಾಡಿದ್ದ ನಾಥೂರಾಮ್ ಗೊಡ್ಸೆಯನ್ನು ಹಿಂದೂ ಭಯೋತ್ಪಾದಕ ಎಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ್ದರು.

ಕಮಲಹಾಸನ್ ಹೇಳಿಕೆ ನಂತರ ಇಡೀ ದೇಶದಲ್ಲಿ ಈ ವಿಚಾರ ಚರ್ಚೆಯಲ್ಲಿರುವಾಗಲೇ ಮಧ್ಯಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ್ದರು. ಈ ಹೇಳಿಕೆ ವಿವಾದವಾಗುತ್ತಿದ್ದಂತೆ ಈ ಕುರಿತಂತೆ ಅವರು ಕ್ಷಮೆ ಕೂಡ ಕೇಳಿದ್ದರು.

ಈ ನಡುವೆ ದಕ್ಷಿಣಕನ್ನಡ ಜಿಲ್ಲೆಯ ಹಾಲಿ ಸಂಸದ ಹಾಗೂ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರುವ ನಳಿನ್ ಕುಮಾರ್ ಕಟೀಲ್ ಅವರ ” ಕ್ರೂರ ಕೊಲೆಗಾರ ಯಾರು” ಟ್ವೀಟ್ ಈಗ ವಿವಾದಕ್ಕೀಡಾಗಿದೆ.

ನಾತೂರಾಮ್ ಗೋಡ್ಸೆ ಕೊಂದವರ
ಸಂಖ್ಯೆ 1
ಅಜ್ಮಲ್ ಕಸಬ್ ಕೊಂದವರ
ಸಂಖ್ಯೆ 72
ರಾಜೀವ್ ಗಾಂಧಿ ಕೊಂದವರ
ಸಂಖ್ಯೆ 17,000
ಈಗ ನೀವೇ ಹೇಳಿ
ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು? ಎಂದು ಟ್ವೀಟ್ ಮಾಡಿದ್ದರು.

ಈಗಾಗಲೇ ಕಮಲ್ ಹಾಸನ್ ಹೇಳಿಕೆ ವಿರುದ್ದ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿರುವಾಗಲೇ , ಬಿಜೆಪಿ ನಾಯಕರು ಪ್ರತಿ ಹೇಳಿಕೆಗಳು ಈಗ ಭಾರಿ ವಿವಾದ ಸೃಷ್ಠಿಸುತ್ತಿದೆ.