Connect with us

LATEST NEWS

ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ

ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ

ಮಂಗಳೂರು ಮಾರ್ಚ್ 22: ಬುದ್ದಿವಂತರ ಜಿಲ್ಲೆಯೆಂದೇ ಕರೆಯಲ್ಪಡುವ ದಕ್ಷಿಣಕನ್ನಡ, ಶಿಕ್ಷಣ,ವ್ಯವಹಾರಿಕವಾಗಿ ಬಹಳ ಮುಂದಿರುವ ಜಿಲ್ಲೆ ಹಾಗೆಯೇ ತಂತ್ರಜ್ಞಾನದಲ್ಲೂ ಕೂಡ ದಕ್ಷಿಣಕನ್ನಡ ಜಿಲ್ಲೆ ಬಹಳ ಮುಂದಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾಡಳಿತ ಮಾತ್ರ ತಂತ್ರಜ್ಞಾನ ಬಳಕೆಯಲ್ಲಿ ಬಹಳ ಹಿಂದೆ ಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಖಾತೆ ಹೊಂದಿಲ್ಲ.

ಕ್ಷಣಾರ್ಧದಲ್ಲಿ ಯುವಜನತೆಗೆ ಸಂಪರ್ಕ ಕಲ್ಪಿಸುವ ಸಾಮಾಜಿಕ ಜಾಲತಾಣಗಳಿಂದ ದಕ್ಷಿಣಕನ್ನಡ ಜಿಲ್ಲಾಡಳಿತ ದೂರ ಉಳಿದಿದೆ. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಪರಿಣಾಮಕಾರಿ ಸಾಮಾಜಿಕ ಜಾಲತಾಣವಾದ ಟ್ವಿಟರ್ ಹಾಗೂ ಫೇಸ್ ಬುಕ್ ನ ಖಾತೆ ಇಲ್ಲ. ಡಿಜಿಟಲ್ ಇಂಡಿಯಾ ಕಲ್ಪನೆಯಲ್ಲಿ ದೇಶ ಮುಂದುವರೆಯುತ್ತಿರುವ ಇಂತಹ ಸಂದರ್ಭದಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಹಿಂದೆ ಉಳಿದಿದೆ.

ಅಲ್ಲದೆ ಸದ್ಯ ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಯುವ ಮತದಾರರನ್ನು ಸೆಳೆಯಲು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದು, ಅತೀ ಹೆಚ್ಚು ಯುವಜನತೆಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದೆ.

ರಾಜ್ಯದ ಬಹುತೇಕ ಜಿಲ್ಲಾಧಿಕಾರಿ ಕಚೇರಿಗಳು ಟ್ವೀಟರ್ ಮತ್ತು ಫೇಸ್ ಬುಕ್ ಖಾತೆಗಳನ್ನು ಹೊಂದಿದ್ದು, ಚುನಾವಣೆಯಲ್ಲಿ ಮತದಾನ ಮಾಡಲು ಅರಿವು ಮೂಡಿಸುವ ಕೆಲಸವನ್ನು ಈ ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಾರ್ವಜನಿಕರಿಗೆ ಈ ಮೂಲಕ ತಿಳಿಸುತ್ತಿದ್ದಾರೆ.

ಮಂಗಳೂರು ನಗರಕ್ಕೆ ಇತ್ತೀಚೆಗೆ ಪೊಲೀಸ್ ಆಯುಕ್ತರಾಗಿ ಆಯ್ಕೆಯಾದ ಸಂದೀಪ್ ಪಾಟೀಲ್ ಅವರು ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದ್ದು, ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಕೂಡ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದ್ದಾರೆ. ಜಿಲ್ಲೆಯ ಅಪರಾಧ, ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿಗಳನ್ನು ತಿಳಿಸುತ್ತಿದ್ದಾರೆ.

ಆದರೆ ಜಿಲ್ಲಾಧಿಕಾರಿ ಕಚೇರಿ ಮಾತ್ರ ಇನ್ನೂ ಯಾವುದೇ ಟ್ವಿಟರ್ ಅಥವಾ ಫೇಸ್ಬುಕ್ ಖಾತೆ ಹೊಂದಿಲ್ಲ. ಪಕ್ಕದ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಈಗಾಗಲೇ ಸಾಮಾಜಿಕ ಜಾಲತಾಣಗಳ ಖಾತೆ ಹೊಂದಿದ್ದು, ನಿರಂತರ ವಾಗಿ ಸುದ್ದಿ, ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಚುನಾವಣೆಯಲ್ಲಿ ಮತದಾನ ಮಾಡಲು ಅರಿವು ಮೂಡಿಸುವಂತಹ ಸ್ವೀಪ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿವೆ. ಆದರೆ ಬುದ್ದಿವಂತರ ಜಿಲ್ಲೆ, ತಂತ್ರಜ್ಞಾನ, ಶೈಕ್ಷಣಿಕವಾಗಿ ತುಂಬಾ ಮುಂದೆ ಇರುವ ದಕ್ಷಿಣಕನ್ನಡ ಜಿಲ್ಲೆಯಲ್ಲೇ ಜಿಲ್ಲಾಧಿಕಾರಿ ಕಚೇರಿ ತಂತ್ರಜ್ಞಾನ ಬಳಕೆಯಲ್ಲಿ ಹಿಂದಿರುವುದು ಸೋಜಿಗದ ಸಂಗತಿ.

Facebook Comments

comments