ಕೈಗಳೇ ಇಲ್ಲದಿದ್ದರೂ ಮತ ಚಲಾಯಿಸಿ ಇತರರಿಗೆ ಮಾದರಿಯಾದ ದಿವ್ಯಾಂಗ ಸಬಿತಾ ಮೋನಿಶ್

ಮಂಗಳೂರು ಎಪ್ರಿಲ್ 18: ಮತದಾನದ ಬಗ್ಗೆ ಜಾಗೃತಿ ಮೂಡಿಸಿದರೂ ಕುಂಟು ನೆಪ ಹೇಳಿ ಮತದಾನದಿಂದ ತಪ್ಪಿಸಿಕೊಳ್ಳುವವರು ತುಂಬಾ ಜನ ಇದ್ದಾರೆ. ಮತದಾನಕ್ಕಾಗಿ ರಜೆ ನೀಡಿದರೆ ಆ ರಜೆಯಲ್ಲಿ ಟೂರ್ ತೆರಳುವ ಜನರು ಇದ್ದಾರೆ. ಆದರೆ ಇಲ್ಲೊಬ್ಬರು ತಾವೇ ವಿಶೇಷ ಚೇತನವರಾಗಿದ್ದರೂ ಕೂಡ ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮೂಲತಃ ಬೆಳ್ತಂಗಡಿಯವರಾದ ಸಬಿತಾ ಮೋನಿಶ್ ಅನ್ನೋ ಯುವತಿ ತಮಗೆ ಎರಡೂ ಕೈಗಳೇ ಇಲ್ಲದಿದ್ದರೂ ಮತಗಟ್ಟೆಗೆ ಧಾವಿಸಿ ಕಾಲಿನಿಂದಲೇ ವೋಟ್ ಹಾಕಿ ಮಾದರಿಯಾಗಿದ್ದಾರೆ. ಬೆಳ್ತಂಗಡಿಯ ಗರ್ಡಾಡಿಯ ಬೂತ್​​ನಲ್ಲಿ ಮತ ಚಲಾಯಿಸಿದ್ದಾರೆ. ಅಧಿಕಾರಿಗಳು ಸಬಿತಾ ಕಾಲಿನ ಬೆರಳಿಗೇ ಇಂಕ್ ಹಾಕಿದ್ದಾರೆ.

ಸಬಿತಾ ಮೋನಿಶ್ ವಿಶೇಷಚೇತನವರಾಗಿದ್ದರೂ ಕಾಲಿನಿಂದಲೇ ಪರೀಕ್ಷೆ ಬರೆದು ಎರಡು ಉನ್ನತ ಪದವಿ ಪಡೆದ ಕೀರ್ತಿಯೂ ಇವರಿಗಿದೆ.