ಗದಗ, ಜನವರಿ 11: ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟಡದ ಪಾಯ ತೆಗೆಯುವ ವೇಳೆ ಹೊನ್ನಿನ ನಿಧಿ ಪತ್ತೆಯಾಗಿದೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ತಾಯಿ, ಮಗನಿಗೆ ಸನ್ಮಾನ ಮಾಡಲಾಗಿದೆ. ಸದ್ಯ ಚಿನ್ನಾಭರಣ ಪುರಾತತ್ವ ಇಲಾಖೆ ಕೈಸೇರಿದ್ದು ಲಕ್ಕುಂಡಿ ಗುಪ್ತನಿಧಿಯ ವಾರಸುದಾರರು ಯಾರು? ಕುತೂಹಲ ಹೆಚ್ಚಿಸಿದೆ.
470 ಗ್ರಾಂ ಚಿನ್ನ, ವಜ್ರದ ಆಭರಣಗಳು ಪತ್ತೆ
ಗದಗದ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ರಾಜರ ಕಾಲದ ಅಪಾರ ಚಿನ್ನಾಭರಣಗಳ ನಿಧಿ (Gold Treasure) ಪತ್ತೆಯಾಗಿದೆ. ಇದು ಇಡೀ ರಾಜ್ಯದ ಗಮನ ಸೆಳೆದಿದೆ. ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ಪಾಯ ಅಗೆಯುವ ಸಂದರ್ಭದಲ್ಲಿ, ಪ್ರಜ್ವಲ್ ರಿತ್ತಿ ಎಂಬ 8 ವರ್ಷದ ಮಗನಿಗೆ ಒಂದು ಹಿತ್ತಾಳೆ ತಂಬಿಗೆಯಲ್ಲಿ ಚಿನ್ನಾಭರಣ ಸಿಕ್ಕಿವೆ. ಆತ ತಕ್ಷಣವೇ ಗ್ರಾಮದ ಹಿರಿಯರಿಗೆ, ಪಂಚಾಯಿತಿ ಸದಸ್ಯರಿಗೆ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿದ್ದು ಪಾಟೀಲ್‌ಗೆ ವಿಷಯ ತಿಳಿಸಿದ್ದಾನೆ. ಬಳಿಕ ಸಿದ್ದು ಪಾಟೀಲ್ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್‌ಗೆ (HK Patil) ಮಾಹಿತಿ ರವಾನಿಸಿದ್ರು ಹೆಚ್.ಕೆ ಪಾಟೀಲ್ ನಿರ್ದೇಶನದ ಮೇರೆಗೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಲಕ್ಕುಂಡಿ ಗ್ರಾಮಕ್ಕೆ ದೌಡಾಯಿಸಿ, ವಾಸ್ತವಾಂಶ ಪರಿಶೀಲಿಸಿದ್ರು.
ನಿಧಿಯಲ್ಲಿ ಏನಿದೆ?
ನಿಧಿ ಪತ್ತೆ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ರು. ಎಸ್ಪಿ ರೋಹನ್ ಜಗದೀಶ್, ಎಡಿಸಿ ದುರ್ಗೆಶ್, ತಹಶೀಲ್ದಾರ್ ಶ್ರೀನಿವಾಸಮೂರ್ತಿ, ಡಿವೈಎಸ್ಪಿ ಸೇರಿ ಹಲವು ಅಧಿಕಾರಿಗಳು ಸ್ಥಳಕ್ಕೆ ಬಂದು ನಿಧಿಯನ್ನ ವಶಕ್ಕೆ ಪಡೆದುಕೊಂಡರು. ಸುಮಾರು 470 ಗ್ರಾಂ ತೂಕದ ಬಂಗಾರ ಆಭರಣಗಳು ದೊರೆತಿವೆ. ಅವುಗಳಲ್ಲಿ ಕೈ ಖಡಗ, ಸರ, ದೊಡ್ಡ ತೊಡೆಹಾರ, ಬಂಗಾರದ ಗುಂಡುಗಳು, ವಂಕಿ ಉಂಗುರ, ಕಿವಿ ಓಲೆ, ನಾಗಮುದ್ರೆಗಳು, ನಾಗಮಣಿ ಉಂಗುರ, ಬಳೆ, ಕಲ್ಗೆಜ್ಜೆ, 22 ತೂತು ಬಿಲ್ಲೆಗಳು, ವಜ್ರ ಖಚಿತ ಉಂಗುರ ಸೇರಿದಂತೆ ಅನೇಕ ಆಭರಣಗಳು ದೊರೆತಿವೆ.
ಅಕ್ಕಸಾಲಿಗರನ್ನ ಕರಿಸಿ ಮಡಿಕೆಯಲ್ಲಿನ ಚಿನ್ನ ಮೂರು ಗಂಟೆಗಳ ಕಾಲ ಪರಿಶೀಲಿಸಿ ತೂಕ ಮಾಡಲಾಯಿತು. 22 ವಿವಿಧ ಚಿನ್ನದ ಆಭರಣಗಳು ಹಳೇ ಕಾಲದ ಆಭರಣಗಳು ಎನ್ನಲಾಗ್ತಿದೆ. ಸದ್ಯ ಇದರ ಮೌಲ್ಯ ಸುಮಾರು 65 ರಿಂದ 70 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಅಧಿಕಾರಿಗಳು ಗ್ರಾಮದ ಹಿರಿಯರು, ಮುಖಂಡರ ಸಮ್ಮುಖದಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ಜಿಲ್ಲಾಡಳಿತ ಖಜಾನೆಗೆ ಒಪ್ಪಿಸಲಾಗಿದೆ.
ಇನ್ನೂ ಕುಟುಂಬದ ಪ್ರಾಮಾಣಿಕತೆಯನ್ನ ಅಧಿಕಾರಿಗಳು ಹೊಗಳಿ ಕುಟುಂಬಸ್ಥರಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮತ್ತು ಅಬಕಾರಿ ಜಿಲ್ಲಾಧಿಕಾರಿ ಶ್ರೀ ದುರ್ಗೇಶ್ ಪ್ರಜ್ವಲ್‌ಗೆ ಶಾಲು ಹಾಕಿ ಗೌರವಿಸಿದ್ರು. ವಿಷಯವನ್ನು ಸರ್ಕಾರದ ಗಮನಕ್ಕೆ ತಂದ ಗ್ರಾಮ ಪಂಚಾಯತ್ ಸದಸ್ಯೆ ರಜಿಯಾ ಬೇಗಂ ಅವರಿಗೂ ಸನ್ಮಾನ ಮಾಡಲಾಗಿದೆ.
ಇನ್ನು ಲಕ್ಕುಂಡಿ ಗುಪ್ತನಿಧಿಯ ವಾರಸುದಾರರು ಯಾರು..? ನಿಧಿ ಪತ್ತೆ ಹಚ್ಚಿದವರಿಗೂ ಸಿಗಬೇಕಾ ಪಾಲು..? ಎಂಬ ಪ್ರಶ್ನೆಗಳು ಎದ್ದಿವೆ. ಪಾಯ ತೆಗೆಯುವಾಗ ಸಿಕ್ಕ ಚಿನ್ನಿದ ನಿಧಿಯ ಹಕ್ಕುದಾರ ಯಾರು..? ನಿಧಿ ಕಾಯ್ದೆಯ ಪ್ರಕಾರ ಯಾರಿಗೆ ಸೇರಬೇಕು ಚಿನ್ನಾಭಾರಣ? ಎಂಬುದಕ್ಕೆ ಕಾನೂನಿನಲ್ಲಿ ಉಲ್ಲೇಖ ಇದೆ. ಭಾರತದಲ್ಲಿ ಬ್ರಿಟೀಷರ ಕಾಲದಿಂದಲೂ ನಿಧಿ ಕಾಯ್ದೆ ಇದೆ. 100 ವರ್ಷಕ್ಕಿಂತ ಹಳೆಯದಾದ ನಿಧಿ ಸರ್ಕಾರದ ಸ್ವತ್ತು ಆಗಲಿದೆ. ನಿಧಿ ಸರ್ಕಾರದ ಸ್ವತ್ತಾದರೂ ಷರತ್ತುಗಳು ಅನ್ವಯ ಆಗಲಿದೆ. ಕಾಯ್ದೆ ಪ್ರಕಾರ ನಿಧಿ ಪತ್ತೆ ಹಚ್ಚಿದವರಿಗೂ ಪಾಲು ನಿಗಬೇಕು.



