ಬೆಂಗಳೂರು , ಫೆಬ್ರವರಿ 25 : ಆರೋಗ್ಯ ಇಲಾಖೆಯ ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದು ಸೇರಿದಂತೆ ಇತರ ಭಾಷೆಗಳಲ್ಲೂ ಪ್ರಕಟಗೊಂಡಿತ್ತು. ಆದರೆ ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ ಪ್ರಕಟಗೊಂಡಿರುವುದಕ್ಕೆ ಕನ್ನಡ ಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆಯ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು ಸರ್ಕಾರದ ನಿರ್ಧಾರದಲ್ಲಿ ಏನು ತಪ್ಪಿದೆ? ಓಲೈಕೆ ಏನಿದೆ ಇದರಲ್ಲಿ? ಹಿಂದಿಯಲ್ಲಿ ಬರೆದರೆ ಓಲೈಕೆನಾ? ಇಂಗ್ಲಿಷ್ನಲ್ಲಿ ಕೊಟ್ಟರೆ ಇಂಗ್ಲಿಷ್ ಓಲೈಕೆನಾ? ಎಲ್ಲರಿಗೂ ಮಾಹಿತಿ ಇರಲೆಂದು ಜಾಹೀರಾತು ನೀಡಲಾಗುತ್ತದೆ. ಕನ್ನಡ ಇಂಗ್ಲಿಷ್, ಉರ್ದು , ಹಿಂದಿಯಲ್ಲೂ ಆಹ್ವಾನ ಪತ್ರಿಕೆ ಪ್ರಕಟವಾಗಿದೆ. ಉರ್ದು ಜನರೂ ಇದ್ದಾರೆ. ಅವರಿಗೆ ಉರ್ದು ಪತ್ರಿಕೆಗಳಲ್ಲಿ ಉರ್ದುವಿನಲ್ಲಿ ಜಾಹೀರಾತು ಕೊಡಲಾಗಿದೆ ಎಂದರು.