ಮಂಗಳೂರು ನವೆಂಬರ್ 13: ಮಂಗಳೂರಿನ ಹಿರಿಯ ನಾಗರೀಕರು ಇದೀಗ ಸೈಬರ್ ಕಳ್ಳರ ಟಾರ್ಗೆಟ್ ಆಗಿದ್ದಾರೆ. ದಿನದಿಂದ ದಿನಕ್ಕೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಂಗಳೂರಿನರು ಹಿರಿಯ ನಾಗರೀಕರ ಕೋಟಿಗಟ್ಟಲೆ ಹಣ ವನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ನಿಂದ ಹಣ ಕಳೆದುಕೊಳ್ಳುವದರ ಸ್ವಲ್ಪದರಲ್ಲೇ ಬಚಾವ್ ಆಗಿದ್ದರು. ಇದೀಗ ಮತ್ತೊಬ್ಬ ಹಿರಿಯ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ನಲ್ಲಿ ಬರೋಬ್ಬರಿ 1.81 ಕೋಟಿ ಹಣ ಕಳೆದುಕೊಂಡಿದ್ದಾರೆ.


ಮಂಗಳೂರಿನ ಸೆನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ ಸುಮಾರು 58 ವರ್ಷದ ಮಹಿಳೆಯೊಬ್ಬರಿಗೆ ದಿನಾಂಕ: 24-10-2025 ರಂದು ಅವರ ಮೊಬೈಲಿಗೆ ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ- 9381017412 ರಿಂದ ಕರೆ ಮಾಡಿ ಮುಂಬೈ ಕೊಲಾಬ ಪೊಲೀಸ್ ಠಾಣೆಯಿಂದ ಕರೆ ಮಾಡುವುದಾಗಿ ತಿಳಿಸಿ ಮನಿ ಲಾಂಡರಿಂಗ್ ಕೇಸ್ ಹಾಗೂ ಹ್ಯುಮನ್ ಟ್ರಾಫಿಕಿಂಗ್ ಕೇಸ್ ನಲ್ಲಿ ಕಮೀಷನ್ ತೆಗೆದುಕೊಂಡಿರುವುದಾಗಿ ತಿಳಿಸಿ ನೀವು ಸಸ್ಪೆಕ್ಟ್ ಇದ್ದೀರಿ ತನಿಖೆಯ ಬಗ್ಗೆ ನೀವು ವಿಡಿಯೋ ಕಾಲ್ ನಲ್ಲಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

Read This ಬೇಕು ಅಂತ ಹತ್ತಿದ್ದಲ್ಲ ದಾರಿ ತಪ್ಪಿ ಹತ್ತಿದ್ದು – ಪ್ಲೈಓವರನ್ ಪಿಲ್ಲರ್ ಎಡೆಯಲ್ಲಿ ಮಲಗಿದ ವ್ಯಕ್ತಿ 

ಇದರಿಂದ ತುಂಬಾ ಭಯಭೀತರಾಗಿ ಮಹಿಳೆ ಅವರು ಮಾಡಿದ ವಿಡಿಯೋ ಕಾಲ್ ನಲ್ಲಿರುತ್ತಾರೆ ನಂತರ ಅದಕ್ಕೆ ಅವರು ಪಿರ್ಯಾದಿದಾರರಿಂದ ಲೆಟರ್ ಬರೆಯಿಸಿಕೊಂಡು ಅದನ್ನು ಅವರ ವಾಟ್ಸ್ ಆಪ್ ನಂಬ್ರ: 9381017412 ಕ್ಕೆ ಕಳುಹಿಸಿರುತ್ತಾರೆ. ನಂತರ 9381017412 ನಂಬರ್ ನಿಂದ ವಿನೋದ್ ರಾಥೋಡ್ ಹಾಗೂ ರಾಜೇಶ್ ಮಿಶ್ರಾ ಎಂಬ ಅಪರಿಚಿತ ವ್ಯಕ್ತಿಗಳು ತಾವುಗಳು ಪೊಲೀಸ್ ಅಧಿಕಾರಿಗಳೆಂದು ವಾಟ್ಸ್ ಆಪ್ ವಿಡಿಯೋ ಕರೆ ಮಾಡಿ ಪಿರ್ಯಾದಿದಾರರ ವೈಯಕ್ತಿಕ ವಿವರಗಳನ್ನು ಹಾಗೂ ಬ್ಯಾಂಕ್ ನ ವಿವರಗಳು ಹಾಗೂ ಬಾಕಿ ಮೊತ್ತವನ್ನೆಲ್ಲಾ ವಿಚಾರಿಸಿರುತ್ತಾರೆ. ಮರು ದಿನ ಪಿರ್ಯಾದಿದಾರರಿಗೆ ಕರೆ ಮಾಡಿ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿ ಹಣ ಪಾವತಿಸುವಂತೆ ಹಾಗೂ ಪಡೆದುಕೊಂಡ ಎಲ್ಲಾ ಹಣವನ್ನು ವಾಪಾಸು ನೀಡುವಂತೆ ತಿಳಿಸಿರುತ್ತಾರೆ. ಈ ವಿಷಯಯನ್ನು ಯಾರಿಗೂ ತಿಳಿಸಬಾರದೆಂದು ಪಿರ್ಯಾದಿದಾರರಿಗೆ ಭಯ ಹುಟ್ಟಿಸಿ ಬೆದರಿಕೆ ಹಾಕಿರುತ್ತಾರೆ. ಇದರಿಂದ ಪಿರ್ಯಾದಿದಾರರು ಸಂಪೂರ್ಣವಾಗಿ ಭಯ ಭೀತಳಾಗಿ ಅಪರಿಚಿತ ವ್ಯಕ್ತಿಗಳು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ದಿನಾಂಕ: 28-10-2025 ರಿಂದ 11-11-2025 ರವರೆಗೆ ಹಂತ ಹಂತವಾಗಿ ಒಟ್ಟು 1,81,50,000/- ರೂ ಗಳನ್ನು RTGS ಮೂಲಕ ವರ್ಗಾವಣೆ ಮಾಡಿರುತ್ತಾರೆ.

ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಮನೆಯಲ್ಲಿರುವ ಯುವಕರು ಯುವತಿರು ತಮ್ಮ ತಂದೆತಾಯಿ ಹಾಗೂ ಮನೆಯಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡುವ ಹಿರಿಯರಿಗೆ ಡಿಜಿಟಲ್ ಅರೆಸ್ಟ್ ಬಗ್ಗೆ ಮಾಹಿತಿ ನೀಡಬೇಕಾದ ಅವಶ್ಯಕತೆ ಇದೆ. ಇಲ್ಲದಿದ್ದರೆ ಕೋಟಿಗಟ್ಟಲೇ ಹಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.

Share Information