ಬಾಲಿವುಡ್ನ ಸ್ಟಾರ್ ನಟ ರಣವೀರ್ ಸಿಂಗ್ ಹಾಗೂ ಖ್ಯಾತ ನಿರ್ದೇಶಕ ಆದಿತ್ಯ ಧಾರ್ ಕಾಂಬಿನೇಷನ್ನ ‘ಧುರಂಧರ್ 2’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಚಿತ್ರವು ವಿಶ್ವದಾದ್ಯಂತ 501.04 ಕೋಟಿ ರೂ. ಗಳಿಕೆ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಹಲವು ಸಾರ್ವಕಾಲಿಕ ದಾಖಲೆಗಳನ್ನು ಧೂಳೀಪಟ ಮಾಡಿದೆ.

ಇಂಡಸ್ಟ್ರಿ ಟ್ರ್ಯಾಕರ್ ಸಕ್ನಿಲ್ಕ್ ನೀಡಿರುವ ವರದಿಯ ಪ್ರಕಾರ, ಈ ಚಿತ್ರವು ಆರಂಭಿಕ ಎರಡು ದಿನಗಳಲ್ಲಿ ಭಾರತದಲ್ಲಿ 226.27 ಕೋಟಿ ರೂ. ಸಂಗ್ರಹಿಸಿತ್ತು. ಮೂರನೇ ದಿನವಾದ ಶನಿವಾರದಂದು ಬರೋಬ್ಬರಿ 113 ಕೋಟಿ ರೂ. ಗಳಿಸುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 339.27 ಕೋಟಿ ರೂ. ಗಳಿಸಿದೆ. ಈ ಮೂಲಕ ಶಾರುಖ್ ಖಾನ್ ಅವರ ‘ಜವಾನ್’ (128.23 ಕೋಟಿ ರೂ.), ‘ಪಠಾಣ್’ (127.50 ಕೋಟಿ ರೂ.) ಹಾಗೂ ರಣಬೀರ್ ಕಪೂರ್ ಅವರ ‘ಅನಿಮಲ್’ (130.07 ಕೋಟಿ ರೂ.) ಚಿತ್ರಗಳ ಮೊದಲ ಎರಡು ದಿನದ ದಾಖಲೆಗಳನ್ನು ಈ ಸಿನಿಮಾ ಸಲೀಸಾಗಿ ಹಿಂದಿಕ್ಕಿದೆ.
ದಕ್ಷಿಣ ಭಾರತದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ, ಆರಂಭಿಕ ವಾರಾಂತ್ಯದಲ್ಲಿ ಭಾರತದ ಎಲ್ಲಾ ಭಾಷೆಗಳಿಂದ ಒಟ್ಟು 354 ಕೋಟಿ ರೂ. ಗಳಿಸಿ ದಾಖಲೆ ಬರೆದಿತ್ತು. ಪ್ರಸ್ತುತ ‘ಧುರಂಧರ್ 2’ ಕೇವಲ ಮೂರು ದಿನಗಳಲ್ಲಿ 339 ಕೋಟಿ ರೂ. ದಾಟಿದ್ದು, ಭಾನುವಾರದ ಕಲೆಕ್ಷನ್ ಸೇರಿದರೆ ಸಾರ್ವಕಾಲಿಕ ಅತಿ ದೊಡ್ಡ ವಾರಾಂತ್ಯದ ಆರಂಭಿಕ ಚಿತ್ರವಾಗಿ ಹೊರಹೊಮ್ಮುವ ಗುರಿಯನ್ನು ಹೊಂದಿದೆ.
ಉತ್ತರ ಅಮೆರಿಕಾದ (ಯುಎಸ್ಎ ಮತ್ತು ಕೆನಡಾ) ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಅಭೂತಪೂರ್ವ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೂರನೇ ದಿನದಂದು ಅಲ್ಲಿನ ಒಂದು ದಿನದ ಗಳಿಕೆಯು $4.0 ಮಿಲಿಯನ್ (35 ಕೋಟಿ ರೂ.) ನಿಂದ $4.5 ಮಿಲಿಯನ್ (40 ಕೋಟಿ ರೂ.) ಗೆ ಏರಿಕೆ ಕಂಡಿರುವುದು ವಿಶೇಷ.
ಚಿತ್ರದ ತಮಿಳು ಮತ್ತು ತೆಲುಗು ಆವೃತ್ತಿಗಳು ಬಿಡುಗಡೆಯಾದ ನಂತರ ಕಲೆಕ್ಷನ್ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ರಣವೀರ್ ಸಿಂಗ್ ಅವರ ಆಕ್ಷನ್ ಅವತಾರ, ಆದಿತ್ಯ ಧಾರ್ ಅವರ ಅದ್ಭುತ ಮೇಕಿಂಗ್ ಹಾಗೂ ಸಂಜಯ್ ದತ್, ಆರ್. ಮಾಧವನ್ ಅವರಂತಹ ಘಟಾನುಘಟಿ ಕಲಾವಿದರ ನಟನೆ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ. ಭಾನುವಾರ ಚಿತ್ರವು 100 ಕೋಟಿ ರೂ.ಗಳ ಗಡಿಯನ್ನು ಸುಲಭವಾಗಿ ದಾಟುವ ನಿರೀಕ್ಷೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.