Connect with us

LATEST NEWS

ದಿನಕೊಂದು ಕಥೆ- ಮೈದಾನ

ಮೈದಾನ

ನೀವು ದೊಡ್ಡೋರು ನಿಮ್ಮ ಮಾತಿಗೆ ಪೊಲೀಸ್ ಸ್ಟೇಷನ್, ಕೋರ್ಟುಗಳು ಸಹಕಾರ ನೀಡುತ್ತದೆ .ನಾನು ಯಾರ ಬಳಿ ಹೇಳಲಿ. ನನ್ನ ಆಡೋ ಮೈದಾನ ಮಾಯವಾಗಿದೆ. ಮಳೆಗಾಲವಾದರೆ ಕೆಸರಿನೊಂದಿಗೆ ,ಬಿಸಿಲಾದರೆ ಬಿಸಿಯೊಂದಿಗೆ ಆಟವಾಡುತ್ತಿದ್ದೆ ನಮ್ಮ ಖುಷಿಯ ಬಗ್ಗೆ ಯೋಚನೆಗಳಿಲ್ಲದ ನಿರ್ಭಾವುಕರು ನೀವು. ಬೇಲಿಯೂ ನಿಲ್ಲಿಸಿದ್ದೀರಿ .

ಅಪ್ಪ ಸಾಲ ಮಾಡಿ ಕಟ್ಟಿಸಿದ್ದ ಮನೆಯ ಗೋಡೆಯಲ್ಲಿ ತೂತುಗಳೆದ್ದು ನಿಂತಿದೆ.ನಿಮ್ಮ ಬಂದೂಕುಗಳ ಜಗಳಕ್ಕೆ ನನ್ನ ಮೈದಾನವೇ ಬೇಕಾಯಿತಾ?. ನಿರ್ಬಂಧಿತ ಪ್ರದೇಶವೆಂದು ಫಲಕ ಬೇರೆ?. ಯಾವಾಗಲಾದರೊಮ್ಮೆ ಗುಂಡಿನ ಸುರಿಮಳೆ, ಸತ್ತು ಬೀಳೋ ಕೆಲವು ದೇಹಗಳು. ಬಿಟ್ಟರೆ ಉಳಿದ ಸಮಯದಲ್ಲಿ ಬೇಯುತ್ತಿರುತ್ತದೆ ನನ್ನ ಮೈದಾನ .ಆಡೋಕ್ಕಾದರೂ ಅನುಮತಿಸಬಹುದಲ್ಲಾ.

ಕೆಲವು ದಿನದ ಹಿಂದೆ ಬೇಲಿಯಾಚೆಗಿನ ಅಣ್ಣಂದಿರು ಆಟವಾಡೋಕೆ ಬಂದಿದ್ದರು. ಆದರೆ ದೂರದ ನಿಮ್ಮ ಗಾಡಿ ಕಂಡಾಗ ನನ್ನ ಮನೆಗೆ ಹೋಗೆಂದರು .ಅವರು ಬಿಡಿ ನೀವಾದರೂ ಆಡೋಕೆ ಬನ್ನಿ. ನಿಮ್ಮ ಗುಂಡು ನನ್ನಮ್ಮನಿಗೆ ನುಗ್ಗಿದಾಗ ಯಾರೂ ಬಂದಿಲ್ಲ. “ಸುದ್ದಿ-ಸದ್ದಾಗಲೇ ಇಲ್ಲ.

ನಿಮ್ಮ ಬಂದೂಕುಗಳ್ಯಾಕೆ ನನ್ನ ಪಿಸ್ತೂಲಿನ ತರಹ ಬಣ್ಣ ಚೆಲ್ಲಬಾರದು .ಇದು ಯಾರಿಗೂ ಕೇಳಲ್ಲ ಅಲ್ವಾ ?
ಪ್ಲೀಸ್ ನನಗೆ ನನ್ನ ಮೈದಾನ ಆಟವಾಡೋಕೆ ಬೇಕು. ಅದಕ್ಕೂ ನೋವಿದೆ ?ನನ್ನ ಮೃದುವಾದ ಪಾದಗಳ ವಿರಹವಿದೆ.ರಕ್ತ ಕುಡಿದು ಅಜೀರ್ಣವಾಗಿದೆ ನನ್ನ ಮೈದಾನಕ್ಕೆ ? ಮದ್ದು ಕೊಡುವಿರಾ?

ಧೀರಜ್ ಬೆಳ್ಳಾರೆ