Connect with us

    LATEST NEWS

    ದಿನಕ್ಕೊಂದು ಕಥೆ- ಹಣೆಬರಹವಲ್ಲ-ಹಣೆಬೆವರು

    ಹಣೆಬರಹವಲ್ಲ-ಹಣೆಬೆವರು

    ಹಸಿವು ಕಲೆಯನ್ನು ಬೀದಿಗಿಳಿಯುತ್ತದೆ. ಇದು ನಾ ಕಂಡ ದೃಶ್ಯ .ಅದಕ್ಕಾಗಿ ನಿಮ್ಮ ಮುಂದಿಡುತ್ತಿದ್ದೇನೆ. ನೆಲ ಒರಟಾಗಿದ್ದರೂ, ಆಯಕಟ್ಟಿನ ಜಾಗವನ್ನು ಗುರುತಿಸಿದ್ದಾರೆ. ಹೊಟ್ಟೆ ಹೊರೆಯೋಕೆ ಆಧಾರ ಇದೆ ಅನ್ನಿಸುತ್ತಿದೆ.ಇದರಲ್ಲಿ ಶಿಕ್ಷಣ, ಜ್ಞಾನಸಂಪಾದನೆ ,ಬದುಕಿನ ಭವಿಷ್ಯದ ಸಾಧ್ಯತೆಗಳು ಯಾವುದು ಕಾಣಿಸ್ತಾ ಇಲ್ಲ.

    ಆ ದಿನದ ಅನ್ನ ಮಾತ್ರ ಅವರ ಕಣ್ಣಮುಂದಿದೆ. ಮಕ್ಕಳಿಬ್ಬರು ಸಣ್ಣವರು. ಆಸೆ ಕಂಗಳಿಂದ ನೋಡುತ್ತಿದ್ದಾರೆ. ಅಪ್ಪ-ಅಮ್ಮ ನನ್ನ ಗಮನಿಸುತ್ತಿದ್ದಾರೆ. ಗಂಡ-ಹೆಂಡತಿ ಒಂದೂ ಮಾತನಾಡುತ್ತಿಲ್ಲ. ಕಸರತ್ತುಗಳನ್ನು ಪ್ರದರ್ಶಿಸುತ್ತಿದ್ದಾರೆ. ಟೀವಿಯೊಳಗೆ ಇದೇ ಪ್ರದರ್ಶನವಾಗಿದ್ದರೆ ಗೆಲುವು ಇವರ ಕಿರೀಟವಾಗುತ್ತಿತ್ತು. ಬೆಂಕಿಯ ರಿಂಗಿನೊಳಗಿಂದ ಜಿಗಿತಗಳು. ತಲೆಯನ್ನು ನೆಲದ ಮೇಲಿಟ್ಟು ತಿರುಗಿಸುವಿಕೆ, ತನ್ನ ಕೈಮೇಲೆ ತನ್ನ ಮಡದಿಯನ್ನು ಎತ್ತಿಹಿಡಿದೆತ್ತಿ ಏಕಾಗ್ರತೆಯ ಚಾಕಚಕ್ಯತೆ ತೋರಿಸುತ್ತಿದ್ದಾರೆ.

    ಅಗ್ನಿಸಾಕ್ಷಿಯಾಗಿ ಜೊತೆಯಾದವರು ಈ ಕ್ಷಣದವರೆಗೂ ಹಸಿವಿನ ಕಾರಣಕ್ಕೆ ಜೊತೆಯಾಗಿದ್ದಾರೆ. ಹಣೆಬರಹವನ್ನು ನಂಬಿದವರಲ್ಲ, ಹಣೆಬೆವರನ್ನು ನಂಬಿದವರಿರವರು. ಹೊಸ ತರಹದ ಪ್ರಯತ್ನಗಳು ಜನರ ಚಪ್ಪಾಳೆ ಕಂಡಾಗ ಇನ್ನು ಉತ್ಸಾಹದಿಂದ ಮತ್ತೊಮ್ಮೆ ಪ್ರಯತ್ನ ಆಗುತ್ತಲೇ ಇದೆ .ಅವರ ಮೈಯಲ್ಲಿ ಅಲ್ಲಲ್ಲಿ ಸುಟ್ಟಗಾಯಗಳು, ತರಚುಗಾಯಗಳು ಕಾಣಿಸುತ್ತಿವೆ. ಚಪ್ಪಾಳೆಗಳು ನಿಲ್ಲುವವರೆಗೂ ಪ್ರದರ್ಶನಗಳು ನಡೆಯುತ್ತವೆ.

    ಆದರೆ ನೋಡುವ ಕಣ್ಣುಗಳಲ್ಲಿ ಕನಿಕರವಾಗಲಿ ಆಶ್ಚರ್ಯವಾಗಲಿ ಕಾಣುತ್ತಿಲ್ಲ. ಯಾಕೆಂದರೆ ಅದು ಟೀವಿಯೊಳಗಿನ ಬಣ್ಣಬಣ್ಣದ ದೃಶ್ಯವಲ್ಲವಲ್ಲ. ಮಣ್ಣಿನೊಂದಿಗೆ ಬದುಕಿನ ಹೋರಾಟ.ಹಲವರು ನೋಡುಗರು ಕೆಲವರು ನೀಡುವರು ಮಾತ್ರ .ಸಿಕ್ಕಿದ್ದನ್ನು ಆರಿಸಿಕೊಂಡು ತಮ್ಮ ಸಾಮಾನು ಸರಂಜಾಮುಗಳನ್ನು ಹೆಗಲಿಗೇರಿಸಿ ಹೊರಟರು. ಆ ದಿನದ ಊಟಕ್ಕಾಯಿತು.ಮರುದಿನದ ಹಸಿವಿಗೆ ಉತ್ತರ ಹುಡುಕುವ ಕಡೆಗೆ ನಡೆದಿದ್ದಾರೆ . ಕಲೆಯೊಂದು ಬೀದಿಗಿಳಿದಿದೆ….

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply