Connect with us

    LATEST NEWS

    ದಿನಕ್ಕೊಂದು ಕಥೆ- ಓಟ

    ಓಟ

    ಪಾದಗಳು ದಣಿವೂ ನಿಲಿಸಯ್ಯ ಅಂದರು ಆತ ಕೇಳುತ್ತಿಲ್ಲ. ಓಡುತ್ತಿದ್ದಾನೆ .ಊರ ಗದ್ದೆಯಲ್ಲಿ, ಶಾಲಾ ಅಂಗಳದಲ್ಲಿ ,ರಸ್ತೆಯಲ್ಲಿ ಎಲ್ಲಾ ಕಡೆಯೂ ಪಾದಗಳಿಗೆ ಓಡುವುದೇ ಕೆಲಸ . ಹಸಿವಿಗಾಗಿ ಓಟ .ಅದೇ ಓಟವು ಶಾಲೆಯಲ್ಲಿ ಬಹುಮಾನವನ್ನು ತಂದುಕೊಟ್ಟಿದ್ದು. ಗೆಲುವು ಮೊದಲೇ ಒಳಿದದ್ದಲ್ಲ. ಹಲವು ಓಟಗಳ ನಂತರ ಸಿಕ್ಕಿದ್ದು .ಆದರೆ ಅದು ಊಟ ಕೊಡುವುದಿಲ್ಲ ಅಂದವರು ಹಲವರು. ಆದರೂ ಸಾಧಿಸಬೇಕೆನ್ನುವ ಛಲ ಇದ್ದವನು.

    ಅಭ್ಯಾಸ ಮುಂದುವರೆಸಿದ್ದ .ಬಂದ ಪ್ರಶಸ್ತಿಗಳನ್ನು ಇಡಲು ಸ್ಥಳವಿಲ್ಲದಿದ್ದರೂ ಅಲ್ಲೇ ಕಿಟಕಿ ಮೇಲೆ, ಮಣ್ಣಿನ ಗೋಡೆಯ ಮೂಲೆಯಲ್ಲಿ, ಗೋಡಗೆ ಮೊಳೆ ಹೊಡೆದು,ಯಾವುದೋ ಹಳೆಯ ಡಬ್ಬದಲ್ಲಿ ಸಿಕ್ಕಲ್ಲೆಲ್ಲ ಇಡುತ್ತಿದ್ದ. ಗೆಲುವಿನ ಹಸಿವು ನೀಗಿರಲಿಲ್ಲ. ಇವನ ಓಟದ ಗೆಲುವು ಇವನ ಮುಂದಿನ ವಿದ್ಯಾಭ್ಯಾಸಕ್ಕೊಂದು ದಾರಿಮಾಡಿಕೊಟ್ಟಿತು. ಅಲ್ಲಿಯೂ ಓಡುತ್ತಿದ್ದ. ಅದು ಬದುಕಿನ ಅನಿವಾರ್ಯದ ಓಟವಾಗಿತ್ತು.

    ಶಿಕ್ಷಣವು ಅದರೊಂದಿಗೆ ಸಾಗಬೇಕಾಗಿತ್ತು. ಖಾಲಿ ಕಾಲಿನ ಬದಲಿಗೆ ಅಲ್ಲಿ ಶೂಗಳು ಬಂದವು. ದಾರಿ ಸುಗಮವಾಗಿರಲಿಲ್ಲ. ಮೈದಾನದಲ್ಲಿ ಬೆವರು ಹರಿಸಿದಷ್ಟು ಗೆಲ್ಲುವುದು ಸಾಧ್ಯ ಅನ್ನೋದು ಅವನ ನಂಬಿಕೆ .ಊರ ಮಟ್ಟದ ಸಾಧನೆ ರಾಷ್ಟ್ರ ಮಟ್ಟದವರೆಗೂ ತಲುಪಿತು. ಅಲ್ಲಿ ಸಿಕ್ಕ ಸಾಧನೆ ಸನ್ಮಾನಗಳು ಒಂದಷ್ಟು ಬಿಡಿ ಕಾಸುಗಳು ಕನಸಿಗೆ ಜೊತೆಯಾದವು. ಕೆಲಸವೊಂದು ದೊರಕಿತು. ಅಮ್ಮನ ದುಡಿತವನ್ನು ನಿಲ್ಲಿಸಿ ಅವಳಿಗೊಂದಿಷ್ಟು ನೆರವಾಗುವ ಹುಡುಗ. ಈಗ
    ಮತ್ತದೇ ರಸ್ತೆಯಲ್ಲಿ ನಡೆಯುತ್ತಾನೆ.

    ಅಂದು ಹಸಿವೆಯಿಂದ ಓಡಿದ ರಸ್ತೆಗಳು ಹೆಮ್ಮೆಯಿಂದ ಅವನ ಪಾದವನ್ನು ಚುಂಬಿಸುತ್ತಿವೆ. ಮತ್ತೆ ಓಡಲು ಪ್ರೇರೇಪಿಸುವ ಹಳೆಯ ಮೆಡಲುಗಳನ್ನು ಒರೆಸಿ ಹೊಸ ಕಪಾಟಿನೊಳಗೆ ಅಂದವಾಗಿ ಜೋಡಿಸಿದ್ದಾನೆ .ಮಣ್ಣಿನ ಗೋಡೆಗೆ ಗಾರೆ ಬಂದಿದೆ, ಮನೆಗೆ ಬಣ್ಣ ಬಳಿಯಲಾಗಿದೆ. ಮನೆ ಹೊಸದಾಗಿ ಬಿಟ್ಟಿದೆ .ಬದುಕಿನಲ್ಲೂ ಗೆಲುವಿನ ಸಣ್ಣ ಮಿಂಚೊಂದು ಮೂಡುತ್ತಿದೆ. ಬದುಕಿನ ಉತ್ಸಾಹ ಹೆಚ್ಚಿಸುವ ಅಷ್ಟು ಫಲಕಗಳನ್ನು ನೋಡುತ್ತಾನೆ.

    ಸೋಲುಗಳನ್ನು ನೆನಪಿಸಿಕೊಳ್ಳುತ್ತಾನೆ. ಕಣ್ಣಂಚಿನಲ್ಲಿ ಒಂದು ಹನಿ ಕಣ್ಣೀರನ್ನು ತುಂಬಿಕೊಂಡು ಅಂದಿನ ಗೆಲುವನ್ನು ಸೋಲನ್ನ ಎರಡುನ್ನೂ ಒಪ್ಪಿಕೊಂಡಿದ್ದಾನೆ.ನಗುತ್ತಾನೆ ಅಮ್ಮನ ನಗುವಿಗೆ ,ಹೆಮ್ಮೆ ಪಡುತ್ತಾನೆ ಕಷ್ಟಗಳಿದ್ದದ್ದಕ್ಕೆ.ಮತ್ತೆ ಸಾಧನೆಗೆ ‘ಸದಾ’ ಹಾತೊರೆಯುತ್ತಿದ್ದಾನೆ. ಮೈದಾನದ ಓಟ ನಿಂತರು ಬದುಕಿನ ಓಟ ನಿಂತಿಲ್ಲ .ಎರಡು ಕಡೆಗೂ ಗುರಿ ಇರೋದೇ. ಮೈದಾನದ ಓಟದ ಗುರಿಗೆ ಕೊನೆಯಿದೆ. ಬದುಕಿನದಕ್ಕಲ್ಲ ಮತ್ತೆ ಹೆಜ್ಜೆಗಳನ್ನು ಎತ್ತಿಡುತ್ತಾ ಏರುತ್ತಿದ್ದಾನೆ.

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply